- 2ನೇ ವಾರವೂ 52 ಸ್ಥಳಗಳಲ್ಲಿ ಸೌಲಭ್ಯಕ್ಕೆ ವ್ಯವಸ್ಥೆ
- ಪ್ರತಿ ಕೇಂದ್ರದಲ್ಲಿ 100 ನಾಗರಿಕರಿಗೆ ಸೇವೆ ಲಭ್ಯ
ಬೆಂಗಳೂರು: ಸಾರ್ವಜನಿಕರ ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ದಾಖಲಾತಿ ಮಾಡಿಕೊಡುವ ‘ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನ’ದ ಎರಡನೇ ಚರಣ ಶನಿವಾರ (ಮೇ 23) ಐದೂ ಪಾಲಿಕೆಗಳ ಆಯ್ದ 52 ಸ್ಥಳಗಳಲ್ಲಿ ನಡೆಯಲಿದೆ. ಇದಕ್ಕಾಗಿ ಆಯಾ ಕಾರ್ಪೋರೇಷನ್‌ಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ.
ಆಸ್ತಿ ಮಾಲೀಕರ ಭೂ ದಾಖಲೆಗಳ ಸುರಕ್ಷತೆ ಹಾಗೂ ವಂಚನೆಯಿಂದ ರಕ್ಷಿಸುವ ಉದ್ದೇಶದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಳೆದ ಶನಿವಾರ ಅಭಿಯಾನಕ್ಕೆ ಚಾಲನೆ ನಿಡಿದ್ದರು. ಮೊದಲ ಕಾರ್ಯಕ್ರಮದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ 2ನೇ ಕಾರ್ಯಕ್ರಮದಲ್ಲಿ ಇನ್ನೂ ಹೆಚ್ಚಿನ ಜನರಿಗೆ ಸೌಲಭ್ಯ ಒದಗಿಸಲು ಪಾಲಿಕೆಗಳು ವ್ಯವಸ್ಥೆ ಕಲ್ಪಿಸಿವೆ.
ಮೊದಲ ವಾರ 2,939 ಅರ್ಜಿ ಸ್ವೀಕಾರ:
ಕಳೆದ ಶನಿವಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ವಿವಿಧ ಪಾಲಿಕೆಗಳ 52 ಸ್ಥಳಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಒಟ್ಟು 2,939 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ 1,242 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಅನುಮೋದನೆ ನೀಡಿ ಅಂತಿಮ ಇ-ಖಾತಾ ವಿತರಿಸಲಾಗಿದೆ. ಉಳಿದ 1,697 ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಜಿಬಿಎ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಅಭಿಯಾನದ ವೇಳೆ ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ತಾಂತ್ರಿಕ ತಂಡಗಳು ಹಾಗೂ ನಾಗರಿಕ ಸೌಲಭ್ಯ ಸಿಬ್ಬಂದಿ ಸೇರಿ ಸಂಬಂಧಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದು, ಸ್ಥಳದಲ್ಲಿಯೇ ಸಮಸ್ಯೆಗಳ ವಿಲೇವಾರಿ ಹಾಗೂ ಪರಿಹಾರ ಒದಗಿಸಲಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಾದ್ಯಂತ 100 ದಿನಗಳ ಕಾಲ ಪ್ರತಿ ಶನಿವಾರ ಈ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಪ್ರತಿ ಶನಿವಾರವೂ ಆಯಾ ಕಾರ್ಪೋರೇಷನ್ ವ್ಯಾಪ್ತಿಯ ಒಟ್ಟು 52 ಸ್ಥಳಗಳಲ್ಲಿ ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನ ನಡೆಯಲಿದೆ.
ಅಭಿಯಾನ ಕೇಂದ್ರದಲ್ಲಿ ಕಲ್ಪಿಸಿರುವ ವ್ಯವಸ್ಥೆ:
* ನಾಗರಿಕ ಸಹಾಯ ಕೇಂದ್ರಗಳ (ಹೆಲ್ಪ್ ಡೆಸ್ಕ್) ವ್ಯವಸ್ಥೆ
* ಆಸನ ವ್ಯವಸ್ಥೆ ಹಾಗೂ ಸರತಿ ಸಾಲಿನ ವ್ಯವಸ್ಥೆ
* ಮಾಹಿತಿ ಮತ್ತು ಮಾರ್ಗದರ್ಶನ ಫಲಕಗಳ ಅಳವಡಿಕೆ
* ಇಂಟರ್‌ನೆಟ್ ಸೌಲಭ್ಯ ಸಹಿತ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್‌ಗಳ ಸೌಲಭ್ಯ
* ಪಾವತಿ ನೆರವು ವ್ಯವಸ್ಥೆ ಹಾಗೂ ಸಿಬ್ಬಂದಿಯ ನಿಯೋಜನೆ
ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯ:
* ಇ-ಖಾತಾ, ಹೊಸ ಇ-ಖಾತಾ ಹಾಗೂ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಸೇವೆ
* ದೀರ್ಘಕಾಲದಿಂದ ಬಾಕಿ ಇರುವ ಅರ್ಜಿ, ತಿದ್ದುಪಡಿ ಹಾಗೂ ಅಹವಾಲು ವಿಲೇವಾರಿ
* ಹೊಸ ಅರ್ಜಿದಾರರು ಹಾಗೂ ವಾಕ್ ಇನ್ ನಾಗರಿಕರಿಗೆ ಸಂಪೂರ್ಣ ಸೇವಾ ಸೌಲಭ್ಯ
* ಅಂತಿಮ ಇ-ಖಾತಾ ಸಿದ್ಧವಾಗಿರುವ ನಾಗರಿಕರಿಗೆ ದೂರವಾಣಿ ಹಾಗೂ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿ, ಮುದ್ರಿತ ಪ್ರತಿಯನ್ನು ಕೇಂದ್ರದಲ್ಲಿ ಪಡೆದುಕೊಳ್ಳಲು ಅವಕಾಶ
* ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಅಗತ್ಯ ಮಾರ್ಗದರ್ಶನ ಮತ್ತು ತರಬೇತಿ
* ಇ-ಖಾತಾ ಸೇವೆಗಳ ಕುರಿತ ಅಹವಾಲುಗಳಿಗೆ ಸ್ಥಳದಲ್ಲಿಯೇ ತ್ವರಿತ ಪರಿಹಾರ.