propertyauction 
ಬೆಂಗಳೂರು

ಮಧ್ಯಮ ವರ್ಗದವರ ಮೇಲಷ್ಟೇ ‘ಹರಾಜು ಅಸ್ತ್ರ !

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ವಾಣಿಜ್ಯ ಬಿಲ್ಡಿಂಗ್ ಮಾಲೀಕರಿಗೆ ರವಾನೆಯಾಗದ ನೋಟಿಸ್
  • ಜಿಬಿಎ ನಡೆಗೆ ಮಾಜಿ ಕಾರ್ಪೋರೇಟರ್‌ಗಳ ಆಕ್ಷೇಪ
ಬೆಂಗಳೂರು: ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಆಸ್ತಿಗಳನ್ನು ಲೀಲಾವು ಹಾಕುವ ಕ್ರಮವು ಬಡ ಮತ್ತು ಮಧ್ಯಮ ವರ್ಗದವರ ಸ್ವತ್ತಿನ ಮೇಲಷ್ಟೇ ‘ಹರಾಜು ಅಸ್ತ್ರ’ ಪ್ರಯೋಗಿಸಿರುವ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರು ಹಾಗೂ ಮಾಜಿ ಕಾರ್ಪೋರೇಟರ್‌ಗಳು ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕಾರ್ಪೋರೇಷನ್‌ಗಳ ವ್ಯಾಪ್ತಿಯಲ್ಲಿ ಕಂದಾಯ ವಸೂಲಾತಿಗೆ ಆದ್ಯತೆ ನೀಡಲಾಗಿದೆ. ಈ ಕ್ರಮವಾಗಿ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಸ್ವತ್ತಿನ ಮಾಲೀಕರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲಾಗುತ್ತಿದೆ. ಅಂತಿಮ ಎಚ್ಚರಿಕೆ ಬಳಿಕ ಜಪ್ತಿ ಆದೇಶ ಹೊರಡಿಸಿದ್ದರೂ, ಬಾಕಿ ಮೊತ್ತ ಕಟ್ಟದವರ ಆಸ್ತಿಗಳನ್ನು ಹರಾಜು ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಸಣ್ಣ ವಿಸ್ತೀರ್ಣದಲ್ಲಿ ಮನೆಗಳನ್ನು ನಿರ್ಮಿಸಿ ಬಾಕಿ ಉಳಿಸಿಕೊಂಡಿರುವವರನ್ನೇ ಗುರಿ ಮಾಡಲಾಗಿದೆ. ವಾಣಿಜ್ಯ ಕಟ್ಟಡ ಹಾಗೂ ಕೋಟ್ಯಂತರ ರೂ. ಟ್ಯಾಕ್ಸ್​​ ಬಾಕಿ ಇದ್ದರೂ, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದನ್ನು ಮಾಜಿ ಪುರಪಿತೃಗಳು ಪ್ರಶ್ನಿಸಿದ್ದಾರೆ.
ಸದ್ಯ ಐದು ಪಾಲಿಕೆಗಳಲ್ಲಿ 7,020 ಸ್ವತ್ತುಗಳ 437.55 ಕೋಟಿ ರೂ. ತೆರಿಗೆ ಬಾಕಿ ಇದೆ. ಈ ಮೊತ್ತವು ಬಡ್ಡಿ ಹಾಗೂ ಇತರ ಟ್ಯಾಕ್ಸ್ ಒಳಗೊಂಡಿದ್ದು, ಹಲವು ವರ್ಷಗಳಿಂದ ಪಾವತಿ ಮಾಡಿಲ್ಲ. ಈ ಸ್ವತ್ತುಗಳಿಂದ ಬಾಕಿ ವಸೂಲು ಮಾಡಬೇಕಿದ್ದರೂ, ಬಡವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಹಣವಂತರು ಹಾಗೂ ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಆರೋಪ ಪುಷ್ಟೀಕರಿಸುವಂತೆ ಕಾರ್ಪೋರೇಷನ್‌ಗಳು ಸಿದ್ಧಪಡಿಸಿರುವ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯಲ್ಲಿ ಬಹುತೇಕ ವಸತಿ ಕಟ್ಟಡಗಳೇ ಸೇರಿವೆ. ವಾಣಿಜ್ಯ ಕಟ್ಟಡ, ಸೂಪರ್ ಮಾರ್ಕೆಟ್, ಮಾಲ್, ಐಟಿ ಕಂಪನಿಗಳ ತೆರಿಗೆ ಬಾಕಿಯನ್ನು ನಮೂದಿಸಿಲ್ಲ. ವಸತಿ ಕಟ್ಟಡ ಮಾಲೀಕರು ಉಳಿಸಿಕೊಂಡಿರುವ ಬಾಕಿ ಮೊತ್ತವು ಒಂದು ಲಕ್ಷ ರೂ. ಆಸುಪಾಸಿನಲ್ಲಿದೆ. ಆದರೆ, ಮಾಲ್ ಸೇರಿ ಕಮರ್ಷಿಯಲ್ ಬಿಲ್ಡಿಂಗ್‌ಗಳು ಕೋಟಿ ರೂ. ಮೊತ್ತದಲ್ಲಿ ಬಾಕಿ ಉಳಿಸಿಕೊಂಡಿವೆ. ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಲ್ಲಿ ಪಾಲಿಕೆ ಖಜಾನೆಗೆ ಕೋಟ್ಯಂತರ ರೂ. ಬರುತ್ತದೆ. ಈ ಕೆಲಸವನ್ನು ಮಾಡದೆ ಮಧ್ಯಮ ವರ್ಗದವರು ಬಾಕಿ ಉಳಿಸಿಕೊಂಡಿರುವ ಸಣ್ಣ ಮೊತ್ತ ವಸೂಲಿಗೆ ಆದ್ಯತೆ ನೀಡಿರುವುದೇಕೆ ಎಂದು ಸಾರ್ವಜನಿಕರು ಪಾಲಿಕೆಗಳ ಮುಖ್ಯಸ್ಥರ ವಿರುದ್ಧ ಗರಂ ಆಗಿದ್ದಾರೆ.

ಹರಾಜಿಗೆ ಖರೀದಿದಾರರ ಹಿಂದೇಟು:

ಜಿಬಿಎ ಕಂದಾಯ ವಿಭಾಗ ಕೈಗೆತ್ತಿಕೊಂಡಿರುವ ಸ್ವತ್ತುಗಳ ಹರಾಜಿಗೆ ಖರೀದಿದಾರರು ಬೆನ್ನು ತಿರುಗಿಸಿದ್ದಾರೆ. ಕಟ್ಟಡಗಳು ಹಳೆಯದಾಗಿರುವುದು, ಇ-ಖಾತಾ ಸೇರಿ ದಾಖಲಾತಿ ಸರಿಯಿಲ್ಲವೆಂಬ ಅಂಜಿಕೆ, ಸ್ಥಳೀಯರ ವಿರೋಧ ಹಾಗೂ ಇನ್ನಿತರ ಕಾರಣದಿಂದ ಖರೀದಿಗೆ ಜನ ಮುಂದೆ ಬರುತ್ತಿಲ್ಲ. ಮುಖ್ಯವಾಗಿ ಹರಾಜು ಕೂಗಿದ ದಿನವೇ ಒಟ್ಟು ಮೊತ್ತದ ಶೇ.10 ಹಣವನ್ನು ಡಿಮಾಂಡ್ ಡಾಫ್ಟ್​​​ ಮೂಲಕ ಪಾವತಿಸಬೇಕು. ಜತೆಗೆ 45 ದಿನಗಳೊಳಗೆ ಪೂರ್ಣ ಮೊತ್ತ ಪಾವತಿಸಿದ ಬಳಿಕವಷ್ಟೇ ಖರೀದಿದಾರರ ಹೆಸರಿಗೆ ಸ್ವತ್ತು ನೋಂದಣಿ ಮಾಡಲಾಗುತ್ತದೆ. 50 ಲಕ್ಷ ರೂ. ಅಥವಾ 1 ಕೋಟಿ ಮೊತ್ತ ಪಾವತಿಯಾದಲ್ಲಿ ಆದಾಯ ತೆರಿಗೆ ಇಲಾಖೆಯ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಕೆಲವರು ಖರೀದಿಯಿಂದ ಹಿಂದೆ ಸರಿಯುವಂತಾಗಿದೆ.
ಪಾಲಿಕೆವಾರು ಆಸ್ತಿತೆರಿಗೆ ಬಾಕಿ ವಿವರ
ಪಾಲಿಕೆ ಸ್ವತ್ತು ಮೊತ್ತ
ಉತ್ತರ 1,156 79.83 ಕೋಟಿ ರೂ.
ದಕ್ಷಿಣ 1,347 72.30 ಕೋಟಿ ರೂ.
ಪೂರ್ವ 1,615 119.90 ಕೋಟಿ ರೂ.
ಪಶ್ಚಿಮ 1,504 84.23 ಕೋಟಿ ರೂ.
ಕೇಂದ್ರ 1,398 81.26 ಕೋಟಿ ರೂ.
ಒಟ್ಟು 7.020 437.55 ಕೋಟಿ ರೂ.
ವರ್ಷದ ಬಾಕಿ ಇದ್ದರೂ ಹರಾಜು !
ಆಸ್ತಿತೆರಿಗೆ ನಿಯಮಾವಳಿ ಅನ್ವಯ ಪ್ರತೀವರ್ಷ ತೆರಿಗೆ ಪಾವತಿಸಬೇಕು. ಕಾರಣಾಂತರದಿಂದ ಪಾವತಿ ಮಾಡದಿದ್ದಲ್ಲಿ ಮರುವರ್ಷ ದಂಡದೊಂದಿಗೆ ಟ್ಯಾಕ್ಸ್ ಕಟ್ಟಬಹುದು. ಇದಕ್ಕೆ ಕಾನೂನಿನಲ್ಲೇ ಅವಕಾಶ ಇದೆ. ಜತೆಗೆ 2 ವರ್ಷಕ್ಕಿಂತ ಹೆಚ್ಚು ಅವಧಿಯ ಬಾಕಿ ಇದ್ದಲ್ಲಿ ಜಪ್ತಿ ನೋಟಿಸ್ ನೀಡಬಹುದಾಗಿದೆ. ಆದರೆ, ಪಶ್ಚಿಮ ಪಾಲಿಕೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 1 ವರ್ಷ (2024-25) ತೆರಿಗೆ ಬಾಕಿ ಉಳಿಸಿಕೊಂಡಿರುವ ಎರಡು ಸ್ವತ್ತುಗಳನ್ನು ಹರಾಜಿಗೆ ಹಾಕಲಾಗುತ್ತಿದೆ (ವಿಜಯನಗರ ಎಆರ್‌ಒ ವಿಭಾಗ). ಇದು ಜಿಬಿಎ ಹಾಗೂ ಕಾರ್ಪೋರೇಷನ್‌ಗಳ ತಾರತಮ್ಯ ನೀತಿಗೆ ಹಿಡಿದ ಕೈಗನ್ನಡಿ ಎಂದು ಸ್ವತ್ತುದಾರರೊಬ್ಬರು ದೂರಿದ್ದಾರೆ.
ಮಂತ್ರಿ ಮಾಲ್‌ನಿಂದ 20 ಕೋಟಿ ಬಾಕಿ:
ನಗರದ ಪ್ರಮುಖ ವಾಣಿಜ್ಯ ಸಂಕೀರ್ಣಗಳಲ್ಲಿ ಒಂದೆನಿಸಿರುವ ಮಲ್ಲೇಶ್ವರದ ಮಂತ್ರಿ ಮಾಲ್ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡೇ ಬರುತ್ತಿದೆ. ಪಾಲಿಕೆ ಹಲವು ಬಾರಿ ಬೀಗ ಹಾಕಿದ್ದರೂ, ಈವರೆಗೂ ಬಾಕಿ ಮೊತ್ತವನ್ನು ಪೂರ್ಣವಾಗಿ ಪಾವತಿಸಿಲ್ಲ. ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಕಂತುಗಳಲ್ಲಿ ಪಾವತಿ ಮಾಡುತ್ತಿದೆ. ಸದ್ಯ 20 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಕೇಂದ್ರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
"

ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ಟ್ಯಾಕ್ಸ್ ವಸೂಲು ಮಾಡುವುದು ತಪ್ಪಲ್ಲ. ಆದರೆ, ಕಠಿಣ ಕ್ರಮ ಕೈಗೊಳ್ಳುವ ಮುನ್ನ ಡೀಫಾಲ್ಟರ್ಸ್‌ ವಿಚಾರದಲ್ಲಿ ತಾರತಮ್ಯ ಮಾಡಬಾರದು. ಮಾಲ್, ಐಟಿ ಕಂಪನಿಗಳು ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದ್ದರೂ, ಅಧಿಕಾರಿಗಳು ಮೌನ ವಹಿಸಿದ್ದಾರೆ. ಉಳ್ಳವರ ವಿರುದ್ಧ ಮೌನಿಯಾಗುವ ಅಧಿಕಾರಿಗಳು ಬಡವರ ವಿಚಾರದಲ್ಲಿ ದಂಡಾಸ್ತ್ರ ಪ್ರಯೋಗ ಸರಿಕಾಣದು.- ಎನ್.ಆರ್. ರಮೇಶ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ