- ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಸೂಚನೆ
- ಜೂ.30ರಿಂದ ಮನೆ-ಮನೆ ಭೇಟಿ ನೀಡಲಿರುವ ಬಿಎಲ್ಒ
ಬೆಂಗಳೂರು: ಐದು ನಗರ ಪಾಲಿಕೆಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಸ್ವೀಪ್ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪಾಲಿಕೆವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಎಸ್‌ಐಆರ್ ಕುರಿತು ಸ್ವೀಪ್ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಬುಧವಾರ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವ್ಯಾಪಕ ಸ್ವೀಪ್ ಚಟುವಟಿಕೆಗಳನ್ನು ಕೈಗೊಂಡು ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಜೂ.30ರಿಂದ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಲಿದ್ದು, ಎಲ್ಲ ಬಿಎಲ್ಓಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿಯೇ ಕರ್ತವ್ಯ ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿ ನಿಯೋಜನೆ:
ಸ್ವೀಪ್ ಚಟುವಟಿಕೆಗಳಿಗಾಗಿ ಪಾಲಿಕೆವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ, ಪ್ರತಿದಿನದ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಜತೆಗೆ, ಪಾಲಿಕೆಗಳಲ್ಲಿ ನಡೆಯುವ ಸ್ವೀಪ್ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಜಿಬಿಎ ಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಿ, ಜೂ.30ರವರೆಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಲಾಯಿತು.
ವಿಐಪಿಗಳ ಪಟ್ಟಿ ಸಿದ್ಧಪಡಿಸಿ:
ನಗರದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಿನಿಮಾ ರಂಗದ ಗಣ್ಯರು, ನ್ಯಾಯಾಧೀಶರು, ಕ್ರೀಡಾಪಟುಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಪ್ರಶಸ್ತಿ ಪುರಸ್ಕೃತರನ್ನು ಒಳಗೊಂಡ ವಿವಿಐಪಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯ ಆಯುಕ್ತರು ತಿಳಿಸಿದರು.
ಸಭೆಯಲ್ಲಿ ಆಯುಕ್ತರಾದ ಪಿ.ಸುನೀಲ್ ಕುಮಾರ್, ಜಿ.ಜಗದೀಶ್, ಕೆ.ಎನ್. ರಮೇಶ್, ಡಿ.ಎಸ್. ರಮೇಶ್, ಡಾ. ಕೆ.ವಿ. ರಾಜೇಂದ್ರ, ಅಪರ ಆಯುಕ್ತರು, ಮತದಾರ ನೋಂದಣಾಧಿಕಾರಿಗಳು ಹಾಗೂ ಬೆಂಗಳೂರು ನಗರ, ಪಿಯು ಮಂಡಳಿ, ಆಕಾಶವಾಣಿ, ದೂರದರ್ಶನ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ:
ನಗರದಲ್ಲಿ ಪಾಲಿಕೆವಾರು ಜಾಗೃತಿ ಕಾರ್ಯಕ್ರಮಗಳು, ಮ್ಯಾರಥಾನ್, ಸೈಕ್ಲೋಥಾನ್, ಟ್ರೈಸೈಕಲ್ ಜಾಥಾ ಸೇರಿ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು. ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕ್ಲಬ್‌ಗಳು ಸೇರಿ ವಿವಿಧ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನಾಮಫಲಕಗಳು ಹಾಗೂ ಘೋಷಣೆಗಳ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದು ಮುಖ್ಯ ಆಯುಕ್ತರು ತಿಳಿಸಿದರು.
"
ಎಸ್‌ಐಆರ್ ಕುರಿತು ಮತದಾರ ನೋಂದಣಾಧಿಕಾರಿಗಳು, ಬಿಎಲ್‌ಒಗಳು ಸೇರಿ ಎಲ್ಲ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
- ವಸ್ತ್ರದ್, ರಾಜ್ಯ (ಮುಖ್ಯ ಚುನಾವಣಾಧಿಕಾರಿ-ಕರ್ನಾಟಕ) ಸ್ವೀಪ್ ನೋಡಲ್ ಅಧಿಕಾರಿ