suspend 
ಬೆಂಗಳೂರು

ಎಆರ್‌ಒ ಮಂಜುಳ ಸೇವೆಯಿಂದ ಅಮಾನತು

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಉಪ ಆಯುಕ್ತ (ಆಡಳಿತ) ಅವರಿಂದ ಆದೇಶ ಪ್ರಕಟ
  • ಅಕ್ರಮ ಬಡಾವಣೆಯಲ್ಲಿ ಸೈಟ್​​ಗಳಿಗೆ ಎ ಖಾತೆ/ಇ-ಖಾತೆ ಮಾಡಿಕೊಟ್ಟಿರುವ ಪ್ರಕರಣ
ಬೆಂಗಳೂರು: ಅಕ್ರಮವಾಗಿ ನಿರ್ಮಿಸಿರುವ ಬಡಾವಣೆಯಲ್ಲಿ 50ಕ್ಕೂ ಅಧಿಕ ಸಂಖ್ಯೆಯ ನಿವೇಶನಗಳಿಗೆ ಕಾನೂನುಬಾಹಿರವಾಗಿ ಎ ಖಾತೆ/ಇ-ಖಾತೆ ಮಾಡಿಕೊಟ್ಟು ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟುಮಾಡಿರುವ ಪ್ರಕರಣದಲ್ಲಿ ಹೇರೋಹಳ್ಳಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕೆ.ಎಸ್. ಮಂಜುಳಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಬಿಎ ಆದೇಶ ಹೊರಡಿಸಿದೆ.
ಪಶ್ವಿಮ ನಗರ ಪಾಲಿಕೆ ವ್ಯಾಪ್ತಿಯ ಹೇರೋಹಳ್ಳಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುಳಾ ಅವರು 2021ರ ಸರ್ಕಾರಿ ನೌಕರರ (ನಡತೆ) ನಿಯಮಾವಳಿ ನಿಯಮ 3(ಜಿಜಿಜಿ)ನ್ನು ಉಲ್ಲಂಘಿಸಿದ್ದಾರೆ. ಜತೆಗೆ ಗಂಭೀರ ಕರ್ತವ್ಯಲೋಪ ಎಸೆಗಿರುವುದರಿಂದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ನಿರೀಕ್ಷಿಸಿ ಸರ್ಕಾರಿ ನಿಯಮಾವಳಿ ಅನ್ವಯ ಅಮಾನತು ಆದೇಶವನ್ನು ಜಿಬಿಎ ಉಪ ಆಯುಕ್ತ (ಆಡಳಿತ) ಹೊರಡಿಸಿದ್ದಾರೆ.
ಕಳೆದ ತಿಂಗಳು ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ವರು ದಾಖಲೆ ಸಮೇತ ಕೆ.ಎಸ್. ಮಂಜುಳಾ ವಿರುದ್ಧ ದೂರು ಸಲ್ಲಿಸಿದ್ದರು. ಮೇಲಾಧಿಕಾರಿಗಳ ಒಪ್ಪಿಗೆ ಪಡೆಯದೆ ಸ್ವಯಂ ನಿರ್ಧಾರ ಕೈಗೊಂಡು ಅಕ್ರಮ ಬಡಾವಣೆಯ ಸೈಟ್‌ಗಳಿಗೆ ಎ ಖಾತಾ ನೀಡಿ ಪಾಲಿಕೆಗೆ ಮುಜುಗರ ಉಂಟು ಮಾಡಿದ್ದರು. ದೂರು ಹಿನ್ನೆಲೆಯಲ್ಲಿ ಮಂಜುಳಾ ಅವರಿಗೆ ನೋಟಿಸ್ ನೀಡಿ ಸಮಜಾಯಿಷಿ ಕೇಳಲಾಗಿತ್ತು. ಬಳಿಕ ವಲಯದ ಹಿರಿಯ ಅಧಿಕಾರಿಗಳಿಂದ ಕಡತ ತರಿಸಿ ಆಗಿರುವ ತಪ್ಪುಗಳನ್ನು ದೃಢಪಡಿಸಿಕೊಳ್ಳಲಾಗಿತ್ತು. ಇದರ ವರದಿಯನ್ನು ಜಿಬಿಎ ಆಡಳಿತ ವಿಭಾಗಕ್ಕೆ ರವಾನಿಸಿದ ವೇಳೆ, ಅಲ್ಲಿನ ಅಧಿಕಾರಿಗಳು ಪರಾಮರ್ಶೆ ನಡೆಸಿ ತಪ್ಪಾಗಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಮಂಜುಳಾರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇಲಾಖೆ ವಿಚಾರಣೆ ವೇಳೆ ಅನುಮತಿ ಇಲ್ಲದೆ ಕೇಂದ್ರ ಸ್ಥಾನದಿಂದ ಹೊರಹೋಗುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.