ಆರ್ಮಿ ಬೇಸ್ ವಕ್ಶಾಪ್ ಒಪ್ಪಂದ
ಬೆಂಗಳೂರು: ಭಾರತೀಯ ಸೇನೆಯ ಪ್ರಮುಖ ಘಟಕವಾದ 515 ಆರ್ಮಿ ಬೇಸ್ ವರ್ಕ್ಶಾಪ್ (515 ಎಬಿಡಬ್ಲ್ಯು) ದೇಶೀಯ ಡ್ರೋನ್ ತಯಾರಿಕೆ ಹಾಗೂ ತಂತ್ರಜ್ಞಾನ ಸಾಮರ್ಥ್ಯ ವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ರಕ್ಷಣಾ ಸಚಿವಾಲಯದ ಸಂಯೋಜಿತ ಮುಖ್ಯಸ್ಥಾಲಯ ಹಾಗೂ ಇಎಂಇ ನಿರ್ದೇಶನಾಲಯದ ಪರವಾಗಿ ಮೂರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಡ್ರೋನ್ ಉತ್ಪಾದನಾ ಸಾಮರ್ಥ್ಯ ಬಲಪಡಿಸುವ ಉದ್ದೇಶದಿಂದ, ಬೆಂಗಳೂರಿನ ಸ್ಟಾರ್ಟ್ಅಪ್ "ನಾಟಿಕಲ್ ವಿಂಗ್ಸ್ ಏರೋಸ್ಪೇಸ್' ಜತೆ ಒಪ್ಪಂದ ಮಾಡಿಕೊಂಡಿದ್ದು, ಇವು ವಿದ್ಯುತ್ ಚಾಲಿತ ಪ್ರೋಪಲ್ಷನ್ ವ್ಯವಸ್ಥೆ, ಬಿಎಲ್ಡಿಸಿ ಮೋಟಾರ್, ಪ್ರೊಪೆಲರ್ ವಿನ್ಯಾಸ ಹಾಗೂ ಕಾಂಪೋಸಿಟ್ ತಂತ್ರಜ್ಞಾನದಲ್ಲಿ ತಾಂತ್ರಿಕ ಮಾರ್ಗದರ್ಶನ ನೀಡಲಿದೆ. ಇದರಿಂದ ತಂತ್ರಜ್ಞರಿಗೆ ನವೀನ ತರಬೇತಿ ಲಭ್ಯವಾಗಲಿದೆ.
ಇನ್ನೊಂದು ಒಪ್ಪಂದವನ್ನು "ಯಾನೆಂದ್ರಿಯ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯೊಂದಿಗೆ ಮಾಡಲಾಗಿದ್ದು, ಕೃತಕ ಬುದ್ಧಿಮತ್ತೆ ಆಧಾರಿತ ಫ್ಲೈಟ್ ಕಂಟ್ರೋಲ್ ಸಿಸ್ಟಮ್, ಜಿಎನ್ಎಸ್ಎಸ್ ನ್ಯಾವಿಗೇಶನ್ ಹಾಗೂ ಗ್ರೌಂಡ್ ಕಂಟ್ರೋಲ್ ಸ್ಟೇಷನ್ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ನೆರವಾಗಲಿದೆ. ವಿದೇಶಿ ತಂತ್ರಜ್ಞಾನ ಅವಲಂಬನೆ ಕಡಿಮೆ ಮಾಡುವುದೆ ಇದರ ಉದ್ದೇಶವಾಗಿದೆ.
ಮೂರನೇ ಒಪ್ಪಂದವನ್ನು ಗಾಂಧಿನಗರದ ರಾಷ್ಟ್ರೀಯ ಫಾರೆನ್ಸಿಕ್ ಸೈನ್ಸಸ್ ವಿಶ್ವವಿದ್ಯಾಲಯದೊಂದಿಗೆ ಮಾಡಿಕೊಂಡಿದ್ದು, ಡ್ರೋನ್ ಫಾರೆನ್ಸಿಕ್ಸ್, ಸೈಬರ್ ಭದ್ರತೆ ಹಾಗೂ ತಾಂತ್ರಿಕ ವಿಶ್ಲೇಷಣೆಗೆ ಸಹಕಾರ ನೀಡಲಿದೆ.
ಈ ಒಪ್ಪಂದಗಳ ಮೂಲಕ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ, ರಕ್ಷಣಾ ಕ್ಷೇತ್ರದಲ್ಲಿ ನವೋತ್ಸಾಹ ಹಾಗೂ ಆತ್ಮನಿರ್ಭರ ಭಾರತ ಗುರಿ ಸಾಧನೆಗೆ ಮಹತ್ವದ ಉತ್ತೇಜನ ಸಿಗಲಿದೆ.