ಬೆಂಗಳೂರಿನಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಚಿವ ಶಿವಾನಂದ ಪಾಟೀಲ ಶುಕ್ರವಾರ ಮನವಿ ಸಲ್ಲಿಸಿದರು.
- ಮಲ್ಲಿಕಾರ್ಜುನ ಖರ್ಗೆಗೆ ಸಚಿವ ಶಿವಾನಂದ ಪಾಟೀಲ ಮನವಿಪತ್ರ
- ಕೇಂದ್ರದ ನೀತಿಯಿಂದ ಕಬ್ಬು, ಮೆಕ್ಕೆಜೋಳ ಬೆಳೆಗಾರರಿಗೆ ಸಮಸ್ಯೆ
- ದರ, ಎಥೆನಾಲ್ ಹಂಚಿಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ
ಬೆಂಗಳೂರು: ರಾಜ್ಯದ ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಎಪಿಎಂಸಿ ಸಚಿವ ಶಿವಾನಂದ ಪಾಟೀಲ (Minister Shivananda Patil) ಮನವಿ ಮಾಡಿದ್ದಾರೆ.
ಸದಾಶಿವನಗರದ ಅವರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿದ ಅವರು, ಈ ಕುರಿತು ಮನವಿಪತ್ರ ಸಲ್ಲಿಸುವ ಜತೆಗೆ ಬೆಲೆ, ರೈತರ ಹೋರಾಟ, ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಿದರು.
ರಾಜ್ಯದ ಕಬ್ಬು ಬೆಳೆಗಾರರು ಮತ್ತು ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಯನ್ನು ಸಂಸತ್ ಕಲಾಪದಲ್ಲಿ
ಪ್ರಸ್ತಾಪಿಸಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ವಿನಂತಿಸಿದರು.
ಕಬ್ಬು ಬೆಳೆಗಾರರ ಮನವಿ ಮೇರೆಗೆ ಕಬ್ಬು ಪ್ರತಿ ಟನ್‌ಗೆ 3,200 ರೂ. ನೀಡಬೇಕು ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಸರ್ಕಾರಕ್ಕೆ ಒಪ್ಪಿಸಿದೆ. ಜತೆಗೆ ಕಾರ್ಖಾನೆಗಳ ಮಾಲೀಕರು ಹಾಗೂ ಸರ್ಕಾರ ತಲಾ 50 ರೂ. ನೀಡಲಿದ್ದು, ಪ್ರತಿ ಟನ್ ಕಬ್ಬಿಗೆ 3,300 ರೂ. ಸಿಗಲಿದೆ.
ಸಕ್ಕರೆ ಉದ್ಯಮಕ್ಕೆ ಸಂಕಷ್ಟ
ಕೇಂದ್ರ ಸರ್ಕಾರದ ನೀತಿಯ ಪರಿಣಾಮ ಸಕ್ಕರೆ ಉದ್ಯಮ ಸಂಕಷ್ಟದಲ್ಲಿದೆ. ಹೀಗಾಗಿ ಕಬ್ಬು ಬೆಳೆಗಾರರಿಗೂ ಸಮಸ್ಯೆಯಾಗುತ್ತಿದೆ.
ಕಬ್ಬು ಎ್ಆರ್‌ಪಿ ದರ, ಸಕ್ಕರೆ ಬೆಂಬಲ ಬೆಲೆ ಹೆಚ್ಚಳ, ಎಥೆನಾಲ್ ಹಂಚಿಕೆ ಪ್ರಮಾಣ ಹೆಚ್ಚಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದಿದ್ದಾರೆ.
ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 2,400 ರೂ. ನಿಗದಿಪಡಿಸಿದೆ.
ಬೆಲೆ ವ್ಯತ್ಯಾಸ ಯೋಜನೆ (ಪಿಡಿಪಿಎಸ್)ಯಡಿ ಖರೀದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿದ್ದು, ಈವರೆಗೂ ಸ್ಪಂದಿಸಿಲ್ಲ ಎಂದು ದೂರಿದರು.
ಎಥೆನಾಲ್ ಉತ್ಪಾದನೆಗೆ ನಾಫೆಡ್/ಎನ್‌ಸಿಸಿಎಫ್ ಸಂಸ್ಥೆಗಳು ಖರೀದಿಸಿ ಡಿಸ್ಟಿಲರಿಗಳಿಗೆ ಸರಬರಾಜು ಬಗ್ಗೆ ಕೇಂದ್ರ ಸರ್ಕಾರ ಎಸ್‌ಒಪಿ ಹೊರಡಿಸಿದ್ದು, ರಾಜ್ಯದಲ್ಲಿ ಅನುಷ್ಠಾನವಾಗಿಲ್ಲ. ಈ ವಿಷಯವನ್ನು ಕೇಂದ್ರದ ಗಮನಕ್ಕೆ ತರಲಾಗಿದೆ.
ಕೇಂದ್ರದ ಮೇಲೆ ಒತ್ತಡ ತರಬೇಕಾಗಿದ್ದ ರಾಜ್ಯದ ಬಿಜೆಪಿ ಮುಖಂಡರು ರೈತರ ಈ ಹೋರಾಟವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿ ಸಮಸ್ಯೆ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಸಚಿವ ಶಿವಾನಂದ ಪಾಟೀಲ ಕೋರಿದರು.