ಲಾಲ್‌ಬಾಗ್ ಸಮೀಪ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಮಲಿಂಗಾರೆಡ್ಡಿ ಅವರು ನಾಗರಿಕರಿಗೆ ಗಣೇಶನ ಉಚಿತ ಮೂರ್ತಿಗಳನ್ನು ವಿತರಿಸಿದರು. ಗುರುಪ್ರಸಾದ್ ಇತರರಿದ್ದರು.
ಬೆಂಗಳೂರು: ಜೇಡಿ ಮಣ್ಣಿನಿಂದ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಪೂಜಿಸುವ ಮೂಲಕ ಪರಿಸರಸ್ನೇಹಿಯಾಗಿ ಹಬ್ಬ ಆಚರಿಸಬೇಕು. ಆ ಮೂಲಕ ಜಲಮಾಲಿನ್ಯ ತಡೆಯಬೇಕು ಎಂದು ಪರಿಸರ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದ ಲಾಲ್‌ಬಾಗ್ ಉದ್ಯಾನವನದ ಸಮೀಪದ ಅವೆನ್ಯೂ ರಸ್ತೆ ಆರ್ಯ ವೈಶ್ಯ ಮಂಡಳಿ ಹಾಗೂ ವಾಸವಿ ಯುವಜನ ಸಂಘದಿAದ ಏರ್ಪಡಿಸಿದ್ದ ಗಣೇಶ ಮೂರ್ತಿಗಳ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಸಾಯನಿಕ ವಸ್ತುಗಳನ್ನು ಬಳಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಯಾರೂ ಖರೀದಿಸಬಾರದು. ಇದರಿಂದ ಮಾಲಿನ್ಯ ಉಂಟಾಗುತ್ತದೆ ಎಂಬುದನ್ನು ಮರೆಯಬಾರದು. ಶ್ರದ್ಧಾ- ಭಕ್ತಿ ಹಾಗೂ ಸಂಪ್ರದಾಯಿಕವಾಗಿ ಹಬ್ಬ ಆಚರಿಸುವಾಗ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವುದು ಎಲ್ಲರ ಕರ್ತವ್ಯ ಎಂದರು.
ವಾಸವಿ ಯುವಜನ ಸಂಘದ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ೧೦ ವರ್ಷಗಳಿಂದ ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಿಕೊಂಡು ಬಂದಿದ್ದು, ಈ ವರ್ಷವೂ ೨೫೦ಕ್ಕೂ ಹೆಚ್ಚು ಮೂರ್ತಿಗಳನ್ನು ವಿತರಿಸಲಾಗಿದೆ ಎಂದರು.