ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್ 
ಬೆಂಗಳೂರು

ಬೆಂಗಳೂರಿಗೆ ಪರ್ಯಾಯ ಪರಿಹಾರ

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ನೆರೆಯ ತಮಿಳುನಾಡು, ಮಹಾರಾಷ್ಟ್ರದಂತೆ ರಾಜ್ಯದಲ್ಲಿಯೂ ರಾಜಧಾನಿ ಬೆಂಗಳೂರು ಮೇಲಿನ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಇತರ ಪ್ರಮುಖ ನಗರಗಳಲ್ಲಿ ಅಗತ್ಯ ವಾತಾವರಣ ರೂಪಿಸಲು ಮತ್ತು ಅಲ್ಲಿನ ಮೂಲಸೌಕರ್ಯ ಬೆಳವಣಿಗೆಗೆ ಸರ್ಕಾರ ಚಿಂತನ ಮಂಥನ ನಡೆಸಿದೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್ ಅವರು ವಿಜಯವಾಣಿ ಸಂವಾದ ಕಾರ್ಯಕ್ರಮದಲ್ಲಿ ಸರ್ಕಾರದ ಈ ಆಶಯವನ್ನು ತೆರೆದಿಟ್ಟಿದ್ದಾರೆ. ಜತೆಗೆ, ಡಿ.ಕೆ.ಶಿವಕುಮಾರ್ ಸರ್ಕಾರದ ಅಭಿವೃದ್ಧಿಪರ ಚಿಂತನೆ, ನಾಡು ಕಟ್ಟುವ ಪ್ರಯತ್ನಗಳ ಪ್ರಮುಖ ಅಂಶವನ್ನು ಅತೀಕ್ ಹಂಚಿಕೊಂಡಿದ್ದಾರೆ.
ಪರ್ಯಾಯ ಆಯ್ಕೆ ಏಕೆ? : ಬೆಂಗಳೂರು ನಗರದ ಮೇಲಿನ ಒತ್ತಡ ತಗ್ಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಪರ್ಯಾಯ ನಗರಗಳ ಅಭಿವೃದ್ಧಿ ಮುಖ್ಯವಾಗಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ಮಾದರಿ ಆಗಿವೆ. ತಮಿಳುನಾಡಿನಲ್ಲಿ ಚೆನ್ನೈ ಹೊರತುಪಡಿಸಿ ಕೊಯಮತ್ತೂರು, ಮದುರೈ, ತ್ರಿಶೂರ್ ಸೇರಿದಂತೆ 10 ನಗರಗಳು ಅಭಿವೃದ್ಧಿ ಆಗಿವೆ. ಮಹಾರಾಷ್ಟ್ರದಲ್ಲಿ ಮುಂಬೈ ಜತೆ ಪುಣೆ, ನಾಗಪುರ, ಕೊಲ್ಲಾಪುರ, ಔರಂಗಾಬಾದ್ ಸೇರಿದಂತೆ 15 ನಗರಗಳು ವಿವಿಧ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿವೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಬೆಂಗಳೂರು ನಗರ ಹೊರತುಪಡಿಸಿದರೆ ಬೇರೆ ನಗರಗಳ ಬೆಳವಣಿಗೆ ಇಲ್ಲ. ಹೀಗಾಗಿ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗಿದೆ ಎಂದರು.

ಎಲ್ಲೆಲ್ಲಿಗೆ ಸರ್ಕಾರದ ಗಮನ

ಐಟಿ-ಬಿಟಿ ಕಂಪನಿಗಳು ಬೆಂಗಳೂರಿನಲ್ಲಿ ಹೂಡಿಕೆ ಹೆಚ್ಚಿಸಿವೆ. ಅವರಿಗೆ ರಾಜಧಾನಿಯಲ್ಲಿ ಉತ್ತಮ ಪರಿಸರವಿದೆ. ಅದೇ ರೀತಿ ಬಂಡವಾಳ ಹೂಡಿಕೆಯನ್ನು ಖಾಸಗಿಯವರು ನಿರ್ಧಾರ ಮಾಡುತ್ತಾರೆ, ಅವರಿಗೆ ಬೇರೆ ನಗರದಲ್ಲಿ ಹೂಡಿಕೆಗೆ ಉತ್ತೇಜನ ಕೊಡಬೇಕಿದೆ. ಮೈಸೂರು ನಗರ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿಯಲ್ಲಿ ಇಂಥ ವಾತಾವರಣ ಅಭಿವೃದ್ಧಿಪಡಿಸಲಾಗುತ್ತಿದೆ. ಆನಂತರ ಶಿವಮೊಗ್ಗ, ತುಮಕೂರು, ದಾವಣಗೆರೆ, ರಾಯಚೂರು, ಬಳ್ಳಾರಿಗೆ ಹೆಚ್ಚು ಗಮನ ಕೊಡಬೇಕಿದೆ ಎಂದು ಹೇಳಿದರು.

ಆಗುತ್ತಾ ಗ್ರೇಟರ್ ಮಂಗಳೂರು?

ಗ್ರೇಟರ್ ಮಂಗಳೂರು ನಗರ ೋಷಣೆಗೆ ಚರ್ಚೆ ನಡೆದಿದೆ. ಇಂತಹ ನಿರ್ಧಾರದಿಂದ ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅತೀಕ್ ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಇರುವ 13 ನಗರ ಪಾಲಿಕೆಗಳು ಮತ್ತು 31 ಜಿಲ್ಲಾ ಕೇಂದ್ರಗಳಲ್ಲಿ ಕೂಡಲೇ ನಗರ ಯೋಜನೆ ತಯಾರಿಸಬೇಕು. ಆ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಯದಂತೆ ನೋಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜತೆಗೆ ಪ್ರತಿಯೊಂದು ನಗರ ಸಭೆ ಮತ್ತು ಜಿಲ್ಲಾ ಕೇಂದ್ರಕ್ಕೆ ಕೆ-ಶಿಪ್ ಯೋಜನೆಯಲ್ಲಿ ಪೆರಿೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದಲ್ಲದೆ, 8 ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿ, 28 ಸಾವಿರ ಕಿಮೀ ರಾಜ್ಯ ಹೆದ್ದಾರಿ, 50 ಸಾವಿರ ಕಿಮೀ ಜಿಲ್ಲಾ, ತಾಲೂಕು ಹೆದ್ದಾರಿಗಳ ಸರ್ವೇ ನಡೆಸಲಾಗಿದ್ದು, ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳು ಸಂಚಾರ ನಡೆಸುತ್ತಿವೆ. ಎಲ್ಲಿ ಸಂಚಾರಸಿಕ್ಕು ಇದೆ ಎಂಬುದರ‌್ನ ಅಧ್ಯಯನ ನಡೆಸಿದ್ದು, ಮಧ್ಯಮ ಕಾಲಾವಧಿ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.

ಟೆಕ್ನಾಲಜಿ ಹಬ್‌ಗೆ ಉತ್ತೇಜನ

ಮೈಸೂರು- ಚಾಮರಾಜನಗರ, ಮಂಗಳೂರು-ಉಡುಪಿ-ಮಣಿಪಾಲ್, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲುಬುರಗಿಯಲ್ಲಿ ಐಟಿ- ಬಿಟಿ ಕ್ಷೇತ್ರ ಅಭಿವೃದ್ಧಿಪಡಿಸಲು ನಿರ್ಧಾರ ಮಾಡಲಾಗಿದೆ. ಐದು ಕ್ಲಸ್ಟರ್‌ಗಳಾಗಿ ಮಾಡಿದ್ದು, ಪ್ರತಿ ಕ್ಲಸ್ಟರ್‌ನಲ್ಲಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ (ಜಿಟಿಸಿ) ಸ್ಥಾಪಿಸಲಾಗುತ್ತದೆ. ತಕ್ಷಣಕ್ಕೆ ಹೊಸಕಟ್ಟಡ ನಿರ್ಮಾಣಕ್ಕೆ ಹೋಗದೇ ಇರುವ ಸರ್ಕಾರಿ ಕಟ್ಟಡ ಗುರುತಿಸಿ ಅಲ್ಲಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ತೆರೆಯಲು ನಿರ್ಧಾರ ಮಾಡಲಾಗಿದೆ. ಮೈಸೂರಿನಲ್ಲಿ ಕರ್ನಾಟಕ ಮುಕ್ತ ವಿವಿಯ ಕಟ್ಟಡವೊಂದು ಬಳಕೆ ಆಗದೆ ಖಾಲಿ ಇತ್ತು. ಇದನ್ನು ಬಳಸಿಕೊಂಡು ಜಿಟಿಸಿ ಸ್ಥಾಪನೆ ಮಾಡಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ ಮಾಡಲಿದ್ದಾರೆ ಎಂದು ಎಲ್.ಕೆ.ಅತೀಕ್ ವಿವರಿಸಿದರು.