- ಬಿಡಿಎ ನಿರ್ಮಿತ ಕಾರಂತ ಲೇಔಟ್‌ನ ಭೂಮಾಲೀಕರಿಗೆ ಪರಿಹಾರದ ಹಂಚಿಕೆ ಪತ್ರ ವಿತರಣೆ
- ಒಂದೇ ಬಾರಿ 3,886 ಸಂತ್ರಸ್ತರಿಗೆ 3 ಕೋಟಿ ಚದರ ಅಡಿ ಭೂಪರಿಹಾರಕ್ಕೆ ಚಾಲನೆ
ಬೆಂಗಳೂರು: ಡಾ. ಕೆ.ಶಿವರಾಮ ಕಾರಂತ ಬಡಾವಣೆಗಾಗಿ ಜಮೀನು ನೀಡಿರುವ ರೈತರಿಗೆ ಮೌಲ್ಯಯುತ ನಿವೇಶನಗಳನ್ನು ನೀಡಲಾಗುವುದು. ಯಾವುದೇ ತಾರತಮ್ಯ ಮಾಡದೆ ಭೂಪರಿಹಾರವನ್ನು ಪಾರದರ್ಶಕವಾಗಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ನಗರದ ನೆಹರು ತಾರಾಲಯದ ಯು.ಆರ್. ಭವನದಲ್ಲಿ ಸೋಮವಾರ ಬಿಡಿಎ ಆಯೋಜಿಸಿದ್ದ ಡಾ. ಕೆ.ಶಿವರಾಮ ಕಾರಂತ ಬಡಾವಣೆಯ ಭೂ ಮಾಲೀಕರಿಗೆ ಪರಿಹಾರದ ನಿವೇಶನ ಹಂಚಿಕೆ ಪತ್ರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಕಾರಂತ ಲೇಔಟ್ ವ್ಯಾಪ್ತಿಗೆ ಒಳಪಡುವ ವೀರಸಾಗರ ಗ್ರಾಮದ ಎಸ್.ಪದ್ಮ, ವಿ.ಎಸ್. ಇಂದಿರಾ ಸೇರಿ ಕೆಲ ರೈತ ಕುಟುಂಬಗಳ ಸದಸ್ಯರಿಗೆ ಸಿಎಂ ಅವರು ಹಂಚಿಕೆ ಪತ್ರವನ್ನು ಸಾಂಕೇತಿಕವಾಗಿ ನೀಡಿದರು.
ಬೆಂಗಳೂರಿನ ಬೆಳವಣಿಗೆಯ ಹಿಂದೆ ಸಾವಿರಾರು ರೈತರು, ಭೂ ಮಾಲೀಕರ ಕೊಡುಗೆ ಇದೆ. ಹೀಗಾಗಿ ಅಭಿವೃದ್ಧಿಯ ಜತೆಗೆ ಜಮೀನು ಬಿಟ್ಟುಕೊಟ್ಟಿರುವ ಕುಟುಂಬಗಳು ಬದುಕು ಕಟ್ಟಿಕೊಳ್ಳಬೇಕಿದೆ. ಅಭಿವೃದ್ಧಿಯ ಫಲದಲ್ಲಿ ಅವರಿಗೂ ನ್ಯಾಯಯುತ ಪಾಲು ಸಿಗಬೇಕೆಂಬ ದೃಷ್ಟಿಯಿಂದ ಶೇ.40 ಅಭಿವೃದ್ಧಿಪಡಿಸಿದ (ಪ್ರತಿ ಎಕರೆಗೆ 9,583 ಚದರ ಅಡಿ) ಪರಿಹಾರದ ಸೈಟ್‌ಗಳನ್ನು ನೀಡಲಾಗುತ್ತಿದೆ. ಭೂಮಿ ನೀಡಿದ ರೈತರ ಕೊಡುಗೆಯನ್ನು ಸರ್ಕಾರ ಎಂದಿಗೂ ಮರೆಯುವುದಿಲ್ಲ. ಭವಿಷ್ಯದಲ್ಲಿ ಈ ಸೈಟ್‌ಗಳಿಗೆ ದುಪ್ಪಟ್ಟು ಬೆಲೆ ಬರುವುದರಿಂದ ಅನ್ಯರಿಗೆ ಮಾರಾಟ ಮಾಡದೆ ಜತನದಿಂದ ರಕ್ಷಿಸಿಕೊಳ್ಳಿರಿ ಎಂದು ಕಿವಿಮಾತು ಹೇಳಿದರು.
ಲೇಔಟ್ ರಸ್ತೆಯೊಂದಕ್ಕೆ ಹೆಗಡೆ ಹೆಸರು:
ಕಾರಂತ ಲೇಔಟ್ ರಸ್ತೆಯೊಂದಕ್ಕೆ ಮಾಜಿ ಸಿಎಂ ರಾಮಕೃಷ್ಣ ಹೆಗಡೆಯವರ ಹೆಸರನ್ನು ಇಡಲಾಗುವುದು. ಹಾಗೆಯೆ ಬಡಾವಣೆಗಾಗಿ ಜಮೀನು ನೀಡಿದ ಪ್ರತಿಯೊಬ್ಬರ ಹೆಸರುಗಳನ್ನು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಫಲಕದಲ್ಲಿ ಅಳವಡಿಸಲಾಗುವುದು. ಈ ಬಡಾವಣೆ ಉತ್ತಮವಾಗಿ ಮುಡಿಬಂದಿದ್ದು, ಒಂದು ಬದಿಯಲ್ಲಿ ಬೆಂಗಳೂರು ಬಿಜಿನೆಸ್ ಕಾರಿಡಾರ್ (ಬಿಬಿಸಿ) ರಸ್ತೆ ಹಾದುಹೋಗಲಿದ್ದು, ಅದಕ್ಕಾಗಿ ಈಗಾಗಲೇ ಟೆಂಡರ್ ಆಹ್ವಾನಿಸಿ ಕಾರ್ಯಾದೇಶ ನೀಡುವ ಹಂತದಲ್ಲಿದೆ ಎಂದು ಶಿವಕುಮಾರ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎಸ್.ಆರ್. ವಿಶ್ವನಾಥ್, ಎಸ್.ಮುನಿರಾಜು, ಬಿಡಿಎ ಆಯುಕ್ತ ಪಿ.ಮಣಿವಣ್ಣನ್, ಬಿಡಿಎ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಒಟ್ಟು 24,714 ಸೈಟ್‌ಗಳ ಹಂಚಿಕೆ:
ಪ್ರಸ್ತುತ ಕಾರಂತ ಬಡಾವಣೆಯಲ್ಲಿ ಒಟ್ಟು 24,714 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಪೈಕಿ 18,399 ಪರಿಹಾರದ ಸೈಟ್‌ಗಳನ್ನು ರೈತರು/ಭೂ ಮಾಲೀಕರಿಗೆ ನೀಡಲಾಗುತ್ತದೆ. 3,500 ರೆವೆನ್ಯೂ ಸೈಟ್‌ದಾರರಿಗೆ ಹಾಗೂ 2,815 ಸೈಟ್‌ಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು.
ಸೈಟ್ ದರ ಹೆಚ್ಚಳಕ್ಕೆ ಸಮರ್ಥನೆ:
ಕಾರಂತ ಬಡಾವಣೆಯಲ್ಲಿ ವಸತಿ, ಮೂಲೆ ಸೈಟ್ ಸೇರಿ ವಿವಿಧ ರೀತಿಯ ಒಟ್ಟು 34,992 ನಿವೇಶನಗಳನ್ನು ರಚಿಸಲಾಗಿದೆ. ಲೇಔಟ್‌ನಲ್ಲಿ ಕಾಮಗಾರಿ ಹಾಗೂ ಮೂಲಸೌಕರ್ಯ ಕಲ್ಪಿಸಲು 16,419 ಕೋಟಿ ರೂ. ಹಣವನ್ನು ಬಿಡಿಎ ಖರ್ಚು ಮಾಡಿದೆ. ಇದರ ಬಗ್ಗೆಯೂ ಆಡಿಟ್ ಮಾಡಲಾಗುವುದು. ನ್ಯಾಯಾಲಯದಲ್ಲಿ ಪ್ರಕರಣ ಇದ್ದ ಕಾರಣ ಒಂದು ವರ್ಷಕ್ಕೆ 1,000 ಕೋಟಿ ರೂ. ನಷ್ಟವಾಗಿದೆ. ಇದರಿಂದಾಗಿ ಈ ಮೊದಲು ನಿಗದಿ ಮಾಡಿದ್ದ ದರಕ್ಕಿಂತ ಈಗ ಪ್ರತಿ ಚದರ ಅಡಿಗೆ 6 ಸಾವಿರ ರೂ. ಮರುನಿಗದಿ ಮಾಡಲಾಗಿದೆ ಎಂದು ಸೈಟ್‌ಗಳ ದರ ಹೆಚ್ಚಳವನ್ನು ಸಿಎಂ ಸಮರ್ಥಿಸಿಕೊಂಡರು.
ಎಚ್‌ಡಿಕೆ ವಿರುದ್ಧ ಪರೋಕ್ಷ ವಾಗ್ದಾಳಿ:
ರೈತರ ಮಕ್ಕಳು ಎಂದು ಹೇಳಿಕೊಳ್ಳುವ ದೊಡ್ಡವರ ಜಮೀನು ಬೆಂಗಳೂರು ಸುತ್ತಮುತ್ತ ಸಾಕಷ್ಟಿದೆ. ಅದನ್ನು ಬೇರೆ ಯೋಜನೆಗಳಿಗೆ ಬಿಟ್ಟುಕೊಡುವ ಮನಸ್ಸು ಮಾಡಿಲ್ಲ. ಆದರೀಗ ರೈತನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ನಮ್ಮ ವಿರುದ್ಧ ಕೂಗೆಬ್ಬಿಸುತ್ತಿದ್ದಾರೆ. ಕಾರಂತ ಲೇಔಟ್ ಅವರ ಕಾಲದಲ್ಲೇ ಆರಂಭವಾಯಿತಾದರೂ, ದಡ ಮುಟ್ಟಿಸಲಿಲ್ಲ. ಇದೇ ರೀತಿ ಪಿಆರ್‌ಆರ್ ರಸ್ತೆ ನಿರ್ಮಿಸುವುದಕ್ಕೂ ಕೆಲವರು ಅಡ್ಡಗಾಲು ಹಾಕಿದರು. ಇನ್ನೂ ಕೆಲವರು ಯೋಜನೆಯ ನಕ್ಷೆಯನ್ನೇ ಬದಲಿಸಿ ತಮ್ಮಿಷ್ಟಕ್ಕೆ ತಕ್ಕಂತೆ ಮಾರ್ಗ ಬದಲಿಸಿದರು. ಹೀಗೆ ಕೈಬಿಟ್ಟ ಜಮೀನಿನ ಬೆಲೆ ಎಕರೆಗೆ 15 ಕೋಟಿ ರೂ.ಗೂ ಹೆಚ್ಚು ಇದೆ. ಸಮಯ ಬಂದಾಗ ದಾಖಲೆಗಳನ್ನು ಬಿಚ್ಚಿಡುವೆ ಎಂದು ಸಿಎಂ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಆಡಳಿತಾತ್ಮಕ ಶುಲ್ಕ ಇಳಿಕೆ:
ಬಿಡಿಎ ರೈತರಿಗೆ ಹಂಚಿಕೆ ಮಾಡುವ ಪರಿಹಾರ ನಿವೇಶನಗಳಿಗೆ ಆಡಳಿತಾತ್ಮಕ ಶುಲ್ಕವನ್ನು ವಿಧಿಸಿದೆ. 30/40 ಅಡಿ ವಿಸ್ತೀರ್ಣದ ಸೈಟ್ 54 ಸಾವಿರ ರೂ. ಹಾಗೂ ಹೆಚ್ಚಿನ ವಿಸ್ತೀರ್ಣದ ಸೈಟ್‌ಗಳಿಗೆ ಲಕ್ಷಕ್ಕಿಂತ ಅಧಿಕ ಶುಲ್ಕ ನಿಗದಿ ಮಾಡಲಾಗಿದೆ. ಇದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಸಿಎಂ ಕಾರ್ಯಕ್ರಮ ಮುಗಿದ ಬಳಿಕ ರೈತ ಮುಖಂಡರು ಹಾಗೂ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಶೇ.25ರಷ್ಟು ಶುಲ್ಕವನ್ನು ಮಾತ್ರ ಮರುನಿಗದಿ ಮಾಡುವಂತೆ ತೀರ್ಮಾನ ಪ್ರಕಟಿಸಿದರು. ಇದನ್ನು ರೈತರು ಸ್ವಾಗತಿಸಿದ್ದಾರೆ.
ಶಿವರಾಮ ಕಾರಂತ ಲೇಔಟ್‌ಅನ್ನು ಉತ್ತಮ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಬಿಡಿಎ ಸಾಕಷ್ಟು ಶ್ರಮಿಸಿದೆ. ಬಡಾವಣೆಯ ಒಟ್ಟು ಜಮೀನಿನಲ್ಲಿ ಶೇ.29.70 ರಸ್ತೆ, ಶೇ.16.66ರಷ್ಟು ಸಿ.ಎ/ಆಟದ ಮೈದಾನ, ಶೇ.39.80 ವಸತಿಗೆ, ಶೇ.3.7 ವಾಣಿಜ್ಯ ಉದ್ದೇಶಕ್ಕೆ ಹಾಗೂ ಶೇ.10.06 ಪ್ರದೇಶವನ್ನು ಇತರ ಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ರೈತರಿಗೆ ನೀಡುವ ಪರಿಹಾರದಲ್ಲಿ ಈಶಾನ್ಯ ದಿಕ್ಕಿನ ಸೈಟ್‌ಗಳನ್ನು ನೀಡಲು ಸಿಎಂ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ಹೊಸದಾಗಿ ಸಮಿತಿಯೊಂದನ್ನು ರಚಿಸಲಾಗಿದೆ.
- ಎನ್.ಎ. ಹ್ಯಾರಿಸ್, ಬಿಡಿಎ ಅಧ್ಯಕ್ಷ