- ಹಿರಿಯ ರಂಗಭೂಮಿ ಕಲಾವಿದೆ ಡಾ. ಬಿ.ಜಯಶ್ರೀ ಸೇರಿ 7 ಮಂದಿ ಆಯ್ಕೆ
- ಡಿ.14ರಂದು ಬೆಂಗಳೂರಿನಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಅಜಿತ್‌ಕುಮಾರ್ ಸ್ಮಾರಕ 2025ನೇ ಸಾಲಿನ ಅಜಿತಶ್ರೀ, ನಾಟ್ಯಶ್ರೀ ಮತ್ತು ಯೋಗಶ್ರೀ ಪ್ರಶಸ್ತಿ ಪ್ರಕಟಿಸಲಾಗಿದ್ದು, ಏಳು ಸಾಧಕರು ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.
ರಾಷ್ಟ್ರೀಯ ಪುರಸ್ಕಾರವಾದ ಅಜಿತಶ್ರೀ ಪ್ರಶಸ್ತಿಯು ಹಿರಿಯ ರಂಗಭೂಮಿ ಕಲಾವಿದೆ ಡಾ. ಬಿ.ಜಯಶ್ರೀ, ಭರತನಾಟ್ಯ ಕಲಾವಿದೆ ಪದ್ಮಿನಿ ರವಿ ಹಾಗೂ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರಿಗೆ ಸಂದಿದೆ. ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ನಾಟ್ಯಶ್ರೀ ಪ್ರಶಸ್ತಿಗೆ ಭರತನಾಟ್ಯ ಕಲಾವಿದೆ ಪೂರ್ಣಿಮಾ ಕೆ. ಗುರುರಾಜ್, ಕೊಳಲುವಾದಕ ಎಚ್.ಎಸ್. ವೇಣುಗೋಪಾಲ್ ಹಾಗೂ ರಂಗಭೂಮಿ ಸಂಘಟಕ ಎಂ.ಎಸ್. ಶ್ಯಾಮಸುಂದರ್ (ಅಂಕಲ್ ಶ್ಯಾಮ್) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 20 ಸಾವಿರ ರೂ. ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಯೋಗಶ್ರೀ ಪ್ರಶಸ್ತಿಗೆ ಶಿವಮೊಗ್ಗದ ಯೋಗ ಶಿಕ್ಷಕ ಭಾ.ಸು. ಅರವಿಂದ ಭಾಜನರಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಡಿ.14ರಂದು ಪ್ರಶಸ್ತಿ ಪ್ರದಾನ:
ಪ್ರಶಸ್ತಿ ಪ್ರದಾನ ಸಮಾರಂಭ ಡಿ.14ರಂದು ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನಟ ‘ಮುಖ್ಯಮಂತ್ರಿ’ ಚಂದ್ರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಜಿತ್‌ಕುಮಾರ್ ಸ್ಮಾರಕ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಕೆ.ಆರ್. ಮುರಳೀಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.