ಬೀದಿನಾಯಿ 
ಬೆಂಗಳೂರು

ಉತ್ತರ ಪಾಲಿಕೆಯಲ್ಲಿ 20 ಬೀದಿನಾಯಿಗಳ ದತ್ತು | stray dogs

ಪ್ರಮುಖ ಮುಖ್ಯಾಂಶಗಳು

  • ಆಯುಕ್ತ ಪಿ. ಸುನೀಲ್​ ಕುಮಾರ್​ ಮಾಹಿತಿ
  • ಆಹಾರ ನೀಡುವ ಸ್ಥಳಗಳ ಗುರುತು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೀದಿನಾಯಿಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ), ಸದ್ದಿಲ್ಲದೆ ಆ ಕಾರ್ಯದಲ್ಲಿ ನಿರತವಾಗಿದೆ. ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿನ 20 ಬೀದಿನಾಯಿಗಳನ್ನು ದತ್ತು ನೀಡಿದ್ದು, ಪ್ರತ್ಯೇಕ ಆಹಾರ ನೀಡಲು 450ಕ್ಕೂ ಅಧಿಕ ಸ್ಥಳಗಳನ್ನು ಗುರುತಿಸಿ ಕೆಲವು ಕಡೆ ಲಕಗಳನ್ನು ಅಳವಡಿಸಲಾಗಿದೆ.
ಮಾನವೀಯ ನಿರ್ವಹಣೆ, ದತ್ತು ಪ್ರೋತ್ಸಾಹ ಮತ್ತು ಪ್ರಾಣಿ ಕಲ್ಯಾಣಕ್ಕೆ ಒತ್ತು ನೀಡುವ ಉದ್ದೇಶದಿಂದ ಉತ್ತರ ಪಾಲಿಕೆಯ ವ್ಯಾಪ್ತಿಯಲ್ಲಿದ್ದ ಸುಮಾರು ಬೀದಿನಾಯಿಗಳನ್ನು ಸುಜಯ ಜಗದೀಶ್​ ಎಂಬುವರಿಗೆ ದತ್ತು ನೀಡಲಾಗಿದೆ ಎಂದು ಉತ್ತರ ಪಾಲಿಕೆ ಆಯುಕ್ತ ಪಿ. ಸುನೀಲ್​ ಕುಮಾರ್​ ಮಾಹಿತಿ ನೀಡಿದ್ದಾರೆ.
ಈ ದತ್ತು ಕಾರ್ಯವನ್ನು ಪ್ರಾಣಿಗಳ ಮೇಲೆ ಕ್ರೂರತೆ ತಡೆ ಕಾಯ್ದೆ, 1960 ಎಬಿಸಿ ಕಾಯ್ದೆ &2023 ನಿಯಮಾವಳಿಗಳ ಅನುಸಾರ ನಡೆಸಲಾಗಿದೆ. ದತ್ತು ನೀಡಲಾದ ಎಲ್ಲ ನಾಯಿಗಳಿಗೆ ಅಗತ್ಯವಾದ ಲಸಿಕೆ, ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ, ಆರೋಗ್ಯ ಪರಿಶೀಲನೆ ಮತ್ತು ಗುರುತಿಸುವಿಕೆ ಕ್ರಮಗಳನ್ನು ಪಾಲಿಕೆಯ ವತಿಯಿಂದ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ನಿಗದಿತ ತಾಣದಲ್ಲಷ್ಟೇ ಆಹಾರ ನೀಡಬೇಕು: ಜಿಬಿಎ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕಲು 450ಕ್ಕೂ ಅಧಿಕ ಸ್ಥಳಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರಿಗೆ ಆ ಜಾಗಗಳನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ಕೆಲವು ಕಡೆ "ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳ' ಎಂದು ಲಕಗಳನ್ನು ಅಳವಡಿಸಲಾಗಿದೆ. ರಾಜಾಜಿನಗರ, ಬಸನವಗುಡಿ ಸೇರಿ ನಗರದ ಕೆಲವೆಡೆ ಈಗಾಗಲೆ ಆಹಾರ ನೀಡುವ ಸ್ಥಳ ಸಿದ್ಧವಾಗಿದೆ. ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಅತಿಹೆಚ್ಚು 150 ಕೇಂದ್ರಗಳನ್ನು ಗುರುತಿಸಲಾಗಿದೆ. ಕೇಂದ್ರ ಪಾಲಿಕೆಯಲ್ಲಿ 90, ಪಶ್ಚಿಮದಲ್ಲಿ 85, ಉತ್ತರದಲ್ಲಿ 70 ಮತ್ತು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 55 ಕೇಂದ್ರಗಳನ್ನು ಗುರುತಿಸಲಾಗಿದೆ. ಈ ತಾಣಗಳನ್ನು ಬಿಟ್ಟು ಇತರ ಪ್ರದೇಶಗಳಲ್ಲಿ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ವೇಳೆ ಉತ್ತರ ಪಾಲಿಕೆಯ ಪಶುಪಾಲನಾ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿಗಳು ಇದ್ದರು.

ಸಾರ್ವಜನಿಕರು ಬೀದಿ ನಾಯಿಗಳನ್ನು ದತ್ತು ಪಡೆಯುವ ಮೂಲಕ ಸಮಾಜಮುಖಿ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಪ್ರಾಣಿ ಕಲ್ಯಾಣ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಆಸಕ್ತ ನಾಗರಿಕರು ಪಾಲಿಕೆಯ ಪಶುಪಾಲನಾ ವಿಭಾಗವನ್ನು ಸಂಪರ್ಕಿಸಿ ಬೀದಿನಾಯಿಗಳನ್ನು ದತ್ತು ಪಡೆಯಲು ಅವಕಾಶವಿದೆ.