ಆದಿತ್ಯ ಬಿರ್ಲಾ ಗ್ರೂಪ್ಗೆ ಮಾರಾಟವಾದ ಆರ್ಸಿಬಿ ಫ್ರಾಂಚೈಸಿ; ಭಾರಿ ಮೊತ್ತಕ್ಕೆ ಸೇಲ್!
ನವದೆಹಲಿ: ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡದ ಬೆನ್ನಲ್ಲೇ ಐಪಿಎಲ್ (IPL) ಹಾಲಿ ಚಾಂಪಿಯನ್ ಆರ್ಸಿಬಿ (RCB) ಕೂಡ ಮಂಗಳವಾರ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್ಸ್ಟೋನ್ ಕಂಪನಿಗಳ ಒಕ್ಕೂಟವು 16,706 ಕೋಟಿ ರೂ.ಗಳಿಗೆ (1.78 ಶತಕೋಟಿ ಡಾಲರ್) ಆರ್ಸಿಬಿ ತಂಡವನ್ನು ಖರೀದಿಸಿದೆ. ಮುಂಬರುವ ಐಪಿಎಲ್ 19ನೇ ಆವೃತ್ತಿಯ ಬಳಿಕ ಆರ್ಸಿಬಿ ತಂಡ ಅಧಿಕೃತವಾಗಿ ಹೊಸ ಮಾಲೀಕರ ಪಾಲಾಗಲಿದೆ.
4 ಕಂಪನಿಗಳ ಒಕ್ಕೂಟವು ಆರ್ಸಿಬಿ ತಂಡದ ಹಾಲಿ ಒಡೆತನ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಜತೆ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿವೆ. ಆರ್ಸಿಬಿ ತಂಡದ ಶೇ. 100 ಷೇರು ಕೂಡ ಈ ಹೊಸ ಮಾಲೀಕರ ಪಾಲಾಗಲಿವೆ. ಇದರಲ್ಲಿ ಆರ್ಸಿಬಿ ಪುರುಷರ ತಂಡ ಮಾತ್ರವಲ್ಲದೆ ಡಬ್ಲ್ಯುಪಿಎಲ್ನಲ್ಲಿ ಆಡುವ ಆರ್ಸಿಬಿ ಮಹಿಳಾ ತಂಡದ ಒಡೆತನವೂ ಸೇರಿದೆ. ಈ ಮೂಲಕ ಆರ್ಸಿಬಿ, ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ತಂಡ ಎನಿಸಿದೆ.
ಆದಿತ್ಯ ಬಿರ್ಲಾ ಗ್ರೂಪ್ನ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಆರ್ಸಿಬಿಯ ಹೊಸ ಮಾಲೀಕತ್ವ ಸಂಸ್ಥೆಯ ಚೇರ್ಮನ್ ಆಗಿರಲಿದ್ದರೆ, ಟೈಮ್ಸ್ ಆಫ್ ಇಂಡಿಯಾ ಗ್ರೂಪ್ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಿರಲಿದ್ದಾರೆ.
ಆರ್ಸಿಬಿ ಮತ್ತು ಆರ್ಆರ್ ಫ್ರಾಂಚೈಸಿಗಳನ್ನು ಹೊಸ ಮಾಲೀಕರಿಗೆ ಹಸ್ತಾಂತರಿಸುವ ಮುನ್ನ ಬಿಸಿಸಿಐನಿಂದ ಒಪ್ಪಿಗೆ ಪಡೆಯುವುದು ಅಗತ್ಯವಾಗಿದೆ. ಹೀಗಾಗಿ ಐಪಿಎಲ್ 19ನೇ ಆವೃತ್ತಿಯಲ್ಲಿ ಆರ್ಸಿಬಿ ಮತ್ತು ಆರ್ಆರ್ ತಂಡಗಳ ಮೇಲ್ವಿಚಾರಣೆ ಹಾಲಿ ಮಾಲೀಕರ ಕೈಯಲ್ಲೇ ಇರಲಿದೆ. ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಒಪ್ಪಿಗೆ ಸಿಕ್ಕ ನಂತರ ಫ್ರಾಂಚೈಸಿಗಳು ಹೊಸ ಮಾಲೀಕರ ಕೈ ಸೇರಲಿವೆ.