ಬೆಂಗಳೂರು: ವಾಲ್ಮೀಕಿಯ ಉದಾತ್ತ ಚಿಂತನೆ, ಮಾನವೀಯ ಮೌಲ್ಯಗಳನ್ನು ಸಾರುವ ಮಧುರ ರಾಮಾಯಣ ಕೃತಿಯು ಹೊಸ ಸೇರ್ಪಡೆ ಎಂದು ಶ್ರೀ ರಾಮಾಯಣ ಪ್ರಸರಣ ಕೇಂದ್ರದ ನಿರ್ದೇಶಕ ಸುರೇಶ್ಕುಮಾರ್ ಹೇಳಿದ್ದಾರೆ.
ನಗರದ ಮಲ್ಲತ್ತಹಳ್ಳಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಧುರಾ ಎನ್. ಭಟ್ ಅವರು ಮುಕ್ತಕ-ಚೌಪದಿ ಛಂದಸ್ಸಿನಲ್ಲಿ ರಚಿಸಿರುವ ಮಧುರ ರಾಮಾಯಣ ಮಹಾಕಾವ್ಯದ ಮೊದಲ ಎರಡು ಸಂಪುಟಗಳಾದ ಬಾಲಕಾಂಡ ಮತ್ತು ಅಯೋಧ್ಯಾಕಾಂಡ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ರಾಮಾಯಣ ಮತ್ತು ಮಹಾಭಾರತಗಳು ಭಾರತದಲ್ಲಿ ಅತ್ಯಂತ ಹೆಚ್ಚು ಓದಲ್ಪಡುವ ಹಾಗೂ ಮತ್ತೆ ಮತ್ತೆ ಬರೆಯಲ್ಪಡುವ ಮಹಾನ್ ಗ್ರಂಥಗಳಾಗಿವೆ. ಈ ಮಹಾನ್ ಪರಂಪರೆಗೆ ಮಧುರ ರಾಮಾಯಣ ಹೊಸ ಸೇರ್ಪಡೆ ಎಂದರು.
ತಮ್ಮ ಸುದೀರ್ಘ ಉಪನ್ಯಾಸದಲ್ಲಿ ಬಾಲಕಾಂಡ ಮತ್ತು ಅಯೋಧ್ಯಾಕಾಂಡಗಳಲ್ಲಿ ಅಭಿವ್ಯಕ್ತವಾಗಿರುವ ವಾಲ್ಮೀಕಿಯವರ ಉದಾತ್ತ ಚಿಂತನೆಗಳು ಹಾಗೂ ಮಾನವೀಯ ಮೌಲ್ಯಗಳನ್ನು ಹಾಗೂ ಮಂಕುತಿಮ್ಮನ ಕಗ್ಗದ ಮುಕ್ತಕಗಳನ್ನು ಸೂಕ್ತವಾಗಿ ಉಲ್ಲೇಖಿಸುವ ಮೂಲಕ ರಾಮಾಯಣದ ಜೀವನ ಮೌಲ್ಯಗಳನ್ನು ವಿವರಿಸಿದರು.
ಇತಿಹಾಸ ತಜ್ಞ ಹಾಗೂ ಬರಹಗಾರ ಸದ್ಯೋಜಾತ ಭಟ್ ಅವರು ಕೃತಿಗಳ ಪರಿಚಯ ಮಾಡಿಕೊಟ್ಟರು. ರಾಮಾಯಣ ಮತ್ತು ಮಹಾಭಾರತಗಳು ಸಹಸ್ರಾರು ವರ್ಷಗಳಿಂದ ಮೌಖಿಕ ಪರಂಪರೆಯ ಮೂಲಕ ಭಾರತೀಯರಿಗೆ ಲಭ್ಯವಾಗಿದ್ದು, ಇತ್ತೀಚಿನ ಶತಮಾನಗಳಲ್ಲಿ ಲಿಖಿತ ರೂಪದಲ್ಲಿ ದಾಖಲಾಗಿವೆ. ವಾಲ್ಮೀಕಿ ರಾಮಾಯಣವು ಜೀವನದ ಆದರ್ಶಗಳನ್ನು ಕಟ್ಟಿಕೊಟ್ಟರೆ, ಮಹಾಭಾರತವು ಮಾನವ ಸಹಜ ಗುಣಸ್ವಭಾವಗಳನ್ನು ತೆರೆದಿಡುತ್ತದೆ ಎಂದು ವಿಶ್ಲೇಷಿಸಿದರು.
ಭಾರತದ ಮೂಲಚರಿತ್ರೆ ಮತ್ತು ಇತಿಹಾಸಗಳು ಪಾಶ್ಚಿಮಾತ್ಯರ ಪ್ರಭಾವದಿಂದ ತಿರುಚಲ್ಪಟ್ಟಿವೆ. ದಾಖಲೆಗಳ ಆಧಾರದಲ್ಲಿ ನೈಜ ಭಾರತೀಯ ಚರಿತ್ರೆಯನ್ನು ಮರುನಿರ್ಮಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಆ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಪುನರ್ಸ್ಥಾಪನೆಗೆ ಸಂಘಟಿತ ಪ್ರಯತ್ನಗಳು ನಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲೇಖಕಿ ಮಧುರಾ ಎನ್. ಭಟ್ ಅವರನ್ನು ಸನ್ಮಾನಿಸಲಾಯಿತು. ಚೇತನಾ ಹೆಗಡೆ ಅವರು ಬಾಲಕಾಂಡದ ಚೌಪದಿಗಳನ್ನು ಹಾಡಿದರು. ಮೈಸೂರಿನ ಬ.ನಾ.ಸುಬ್ರಹ್ಮಣ್ಯ ಭಕ್ತಿಗೀತೆ ಪ್ರಸ್ತುತಪಡಿಸಿದರು. ಸಾಹಿತಿ ಮಹೇಶ ಹೆಗಡೆ ಹಳ್ಳಿಗದ್ದೆ ಇತರರಿದ್ದರು.
ರಾಮಾಯಣದ ಕಥಾನಕವನ್ನು ಛಂದಸ್ಸಿನ ಚೌಕಟ್ಟಿನಲ್ಲಿ ಕಾವ್ಯರೂಪಕ್ಕೆ ತರುವ ಮಹತ್ವದ ಕಾರ್ಯದಲ್ಲಿ ತಮ್ಮ ಕುಟುಂಬದ ಸಹಕಾರ ಹಾಗೂ ವಿದ್ವಾಂಸರ ಪ್ರೇರಣೆ ಮತ್ತು ಮಾರ್ಗದರ್ಶನಕ್ಕೆ ಕೃತಜ್ಞತೆಗಳು. ಮಹಾಕಾವ್ಯದ ಉಳಿದ ಕಾಂಡಗಳ ರಚನೆಯೂ ಮುಂದುವರಿದಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಅವುಗಳನ್ನೂ ಲೋಕಾರ್ಪಣೆಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಮಧುರಾ ಎನ್. ಭಟ್, ಲೇಖಕಿ