stormwater-drai 
ಬೆಂಗಳೂರು

ರಾಜಕಾಲುವೆ ಗಡಿ ಗುರುತಿಸುವಿಕೆ ಪ್ರಕ್ರಿಯೆ ತ್ವರಿತಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಸೂಚನೆ

ಬೆಂಗಳೂರು: ಬೆಳ್ಳಂದೂರು ವೇಸ್ಟ್ ವೀರ್/ಔಟ್‌ಲೆಟ್‌ನಿಂದ ಓಲ್ಡ್ ಏರ್‌ಪೋರ್ಟ್ ರಸ್ತೆ ವರ್ಜೀನಿಯಾ ಮಾಲ್​​ವರೆಗೆ ರಾಜಕಾಲುವೆ ಸಂರಕ್ಷಣೆ, ಬಫರ್ ವಲಯ ಅಭಿವೃದ್ಧಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಭೂ ಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸುವಂತೆ ಪೂರ್ವ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೂಲಸೌಕರ್ಯ ಅಭಿವೃಧ್ಧಿ ಯೋಜನೆಗಳ ಕುರಿತು ಶನಿವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾಲುವೆಯ ಗಡಿಯನ್ನು ಅಧಿಕೃತ ದಾಖಲೆಗಳ ಆಧಾರದ ಮೇಲೆ ನಿಖರವಾಗಿ ಗುರುತಿಸಬೇಕು. ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ಅಂತಿಮಗೊಳಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾಮಗಾರಿಯನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕೆಆರ್‌ಡಿಸಿಎಲ್ ಕಾಮಗಾರಿಗೆ ಭೂಸ್ವಾಧೀನ:

ವರ್ತೂರು ಕೋಡಿಯಿಂದ ಜಿಬಿಎ ವ್ಯಾಪ್ತಿಯ ವರ್ತೂರು-ಗುಂಜೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಕೆಆರ್‌ಡಿಸಿಎಲ್ ವತಿಯಿಂದ ಕೈಗೊಳ್ಳಲಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಈಗಾಗಲೇ ನಕ್ಷೆ ಮಂಜೂರಾತಿ ವೇಳೆ ಭೂಮಾಲೀಕರು ಪರಿತ್ಯಾಜನಾ ಪತ್ರದ ಮೂಲಕ ರಸ್ತೆ ಅಭಿವೃದ್ಧಿಗೆ ಕಾಯ್ದಿರಿಸಿರುವ ಜಾಗವನ್ನು ಬಳಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಅಪರ ಆಯುಕ್ತರು (ಕಂದಾಯ) ಡಾ. ಪ್ರಜ್ಞಾ ಅಮ್ಮೆಂಬಳ, ಜಂಟಿ ಆಯುಕ್ತರು/ಉಪ ಆಯುಕ್ತರು (ಟಿಡಿಆರ್) ಡಾ. ಕೆ.ದಾಕ್ಷಾಯಿಣಿ, ತಾಂತ್ರಿಕ ನಿರ್ದೇಶಕರು (ಬಿ-ಸ್ಮೈಲ್), ಸಹಾಯಕ ಕಾರ್ಯಪಾಲಕ (ಟಿಡಿಆರ್ ವಿಭಾಗ), ಕಾರ್ಯಪಾಲಕ ಅಭಿಯಂತರರು (ಬೃಹತ್ ನೀರುಗಾಲುವೆ ಮತ್ತು ಕೆರೆ ವಿಭಾಗ), ಬಿಡಿಎ ಅಧಿಕಾರಿಗಳು ಉಪಸ್ಥಿತರಿದ್ದರು.