ಅನಾಥ ವಾಹನಗಳ ತೆರವು ಅಭಿಯಾನಕ್ಕೆ ವಸಂತನಗರ ಕ್ವೀನ್ಸ್​ ರಸ್ತೆ ಸಮೀಪ ಶುಕ್ರವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಶಾಸಕ ರಿಜ್ವಾನ್​ ಹರ್ಷದ್​, ಡಿಸಿಪಿ ಕಾರ್ತಿಕ್​ ರೆಡ್ಡಿ ಮತ್ತಿತರರು ಇದ್ದರು. 
ಬೆಂಗಳೂರು

ಅನಾಥ ವಾಹನಗಳಿಗೆ ಬಿತ್ತು ಲಾಕ್​!

ಪ್ರಮುಖ ಮುಖ್ಯಾಂಶಗಳು

  • ಅಭಿಯಾನಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಚಾಲನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯ ಪಾದಚಾರಿ ಮಾರ್ಗ ಹಾಗೂ ರಸ್ತೆಗಳ ಪಕ್ಕದಲ್ಲಿ ನಿಲ್ಲಿಸಲಾದ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿದ್ದು, ಕ್ವಿನ್ಸ್​ ರಸ್ತೆಯಲ್ಲಿ ಬಿಡಾಡಿ ವಾಹನಗಳಿಗೆ ಲಾಕ್​ ಹಾಕುವ ಮೂಲಕ ವಾಹನ ತೆರವು ಅಭಿಯಾನಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ಚಾಲನೆ ನೀಡಿದ್ದಾರೆ.
ಅನಾಥ ವಾಹನಗಳ ತೆರವು ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ರಸ್ತೆಗಳು, ಪಾದಚಾರಿ ಮಾರ್ಗ ಹಾಗೂ ಪಾರ್ಕಿಂಗ್​ ಜಾಗಗಳಲ್ಲಿ ಅನಾಥವಾಗಿ ಬಿದ್ದಿರುವ ಬಿಡಾಡಿ ವಾಹನಗಳ ತೆರವು ಕಾರ್ಯಕ್ಕೆ ಜಿಬಿಎ, ಬಿಡಿಎ ಮತ್ತು ಪೊಲೀಸ್​ ಇಲಾಖೆ ಜಂಟಿಯಾಗಿ ಕಾರ್ಯಾಚರಣೆಯನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ವಾಹನಕ್ಕೆ ಬೀಳಲಿದೆ ಲಾಕ್​: 
ರಸ್ತೆ ಬದಿಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವ ವಾಹನಗಳನ್ನು ಗುರುತಿಸಿ, ಅವುಗಳಿಗೆ ಒಂದು ವಾರದ ಕಾಲಾವಕಾಶದ ನೋಟಿಸ್​ಗಳನ್ನು ಅಂಟಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸದಂತೆ ಚಕ್ರಗಳಿಗೆ ಲಾಕ್​ ಹಾಕಲಾಗುತ್ತಿದೆ. 15 ದಿನಗಳ ಹಿಂದೆಯೇ ಸಾರ್ವಜನಿಕವಾಗಿ ಇಂತಹ ವಾಹನಗಳನ್ನು ತೆರವುಗೊಳಿಸುವಂತೆ ಮನವಿ ಮಾಡಲಾಗಿತ್ತು. ಆದರೂ ಕೆಲವರು ವಾಹನಗಳನ್ನು ರಸ್ತೆಗಳಲ್ಲೆ ಬಿಟ್ಟು ಸಾರ್ವಜನಿಕ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರ ಕಳೆದರೆ ಬಹಿರಂಗ ಹರಾಜು: 
ನೋಟಿಸ್​ ನೀಡಲಾದ ಒಂದು ವಾರದೊಳಗೆ ವಾಹನ ಮಾಲೀಕರು ಬಂದು ಕಾನೂನಿನ ಅನ್ವಯ ನಿಗದಿಪಡಿಸಿರುವ 500 ರಿಂದ 1,000 ರೂ.ವರೆಗಿನ ದಂಡವನ್ನು ಪಾವತಿಸಿ ತಮ್ಮ ವಾಹನಗಳನ್ನು ಕೊಂಡೊಯ್ಯಲು ಅವಕಾಶವಿರುತ್ತದೆ. ಒಂದು ವಾರದ ಅವಧಿಯ ಒಳಗಾಗಿ ಮಾಲೀಕರು ಬರದಿದ್ದರೆ, ಅಂತಹ ವಾಹನಗಳನ್ನು ಟೋಯಿಂಗ್​  ಮಾಡಲಾಗುವುದು. ನಂತರವೂ ಮಾಲೀಕರಿಗೆ ದಂಡ ಮತ್ತು ಟೋಯಿಂಗ್​ ಚಾರ್ಜ್​ ಕಟ್ಟಿ ವಾಹನ ಪಡೆಯಲು ಅವಕಾಶ ಇರುತ್ತದೆ. ಮತ್ತೆಯೂ ಬಾರದಿದ್ದಲ್ಲಿ, ಬಹಿರಂಗ ಹರಾಜು ಹಾಕಲಾಗುವುದು. ನೋಟಿಸ್​ ತಪ್ಪಿಸಲು ವಾಹನವನ್ನು ತೆಗೆದುಕೊಂಡು ಹೋಗಿ ಮತ್ತೊಂದು ರಸ್ತೆಯಲ್ಲಿ ನಿಲ್ಲಿಸುವಂತಹ ತಪ್ಪು ಮಾಡುವವರನ್ನು ಗುರುತಿಸಿ, ಅವರಿಗೆ ಮತ್ತಷ್ಟು ಕಠಿಣವಾದ ದಂಡ ಹಾಗೂ ಶಿೆ ವಿಧಿಸಲು ಪೊಲೀಸ್​ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮುಖ್ಯ ರಸ್ತೆಗಳಿಗೆ ಮೊದಲ ಆದ್ಯತೆ: ಬೆಂಗಳೂರಿನ ಎಲ್ಲ ಭಾಗಗಳಲ್ಲೂ ಏಕಕಾಲಕ್ಕೆ ಈ ಕಾರ್ಯಾಚರಣೆ ನಡೆಸುವುದು ಅಸಾಧ್ಯ. ಆದ್ದರಿಂದ ಸಂಚಾರ ದಟ್ಟಣೆ ಹೆಚ್ಚಿರುವ, ವಾಹನಗಳು ನಿಧಾನವಾಗಿ ಚಲಿಸುವ ಹಾಗೂ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುವ ಮುಖ್ಯ ರಸ್ತೆಗಳನ್ನು ಗುರುತಿಸಿ, ಅಲ್ಲಿ ಮೊದಲ ಆದ್ಯತೆಯ ಮೇರೆಗೆ ಪಾರ್ಕಿಂಗ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಹಿಂದೆ ಟೋಯಿಂಗ್​ ಪ್ರಕ್ರಿಯೆ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಬಾರಿ ಆ ರೀತಿಯ ಯಾವುದೇ ದೂರುಗಳು ಬರದಂತೆ, ನಿಯಮಗಳು ದುರುಪಯೋಗವಾಗದಂತೆ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಹಂತ ಹಂತವಾಗಿ ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ ಎಂದು ತಿಳಿಸಿದರು.
ಅಪ್​ನಲ್ಲಿ ದೂರು ನೀಡಿ
ಪೊಲೀಸ್​ ಇಲಾಖೆಯು ಅನಾಥವಾಗಿ ಬಿದ್ದಿರುವ ಸುಮಾರು 1,581 ವಾಹನಗಳನ್ನು ಪ್ರಾಥಮಿಕವಾಗಿ ಗುರುತಿಸಿದೆ. ಆದರೆ, ಈ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಂಚಾರ ಪೊಲೀಸ್​ ಇಲಾಖೆಯ ಅಸಂ ಮೊಬೈಲ್​ ಆ್ಯಪ್​ ಮೂಲಕ ಸಾರ್ವಜನಿಕರು ತಮ್ಮ ಏರಿಯಾಗಳಲ್ಲಿ ಬಿದ್ದಿರುವ ಇಂತಹ ಅನಾಥ ವಾಹನಗಳ ಬಗ್ಗೆ ರಿಪೋರ್ಟ್​ ಮಾಡಬಹುದು ಎಂದು ಸಚಿವರು ತಿಳಿಸಿದರು.

ರಸ್ತೆಗಳು ಸಾರ್ವಜನಿಕರ ಓಡಾಟಕ್ಕೆ ಇರುವುದೇ ಹೊರತು ವಾಹನಗಳನ್ನು ಬಿಸಾಡುವ ಗುಜರಿ ಜಾಗವಲ್ಲ. ನಿಮ್ಮ ವಾಹನಗಳನ್ನು ನಿಮ್ಮ ಸ್ವಂತ ಜಾಗ ಅಥವಾ ಮನೆಗಳಲ್ಲಿ ಇಟ್ಟುಕೊಳ್ಳಿ. ರಸ್ತೆಗಳು ಸಾರ್ವಜನಿಕರ ಸ್ವತ್ತು, ಅದನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.

— ಕೃಷ್ಣ ಬೈರೇಗೌಡ, ಬೆಂಗಳೂರು ನಗರಾಭಿವೃದ್ಧಿ ಸಚಿವ

ಮುಖ್ಯಾಂಶಗಳು

* ಮನೆಗಳ ಮುಂದೆ ಪಾರ್ಕಿಂಗ್​ ಜಾಗ ಇರಬೇಕು ಎನ್ನುವುದು ಕಾನೂನಿನಲ್ಲಿದ್ದರೂ ಕಳೆದ 30&40 ವರ್ಷಗಳಿಂದ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ 
*ಬಳಕೆಯಲ್ಲಿರುವ ಮತ್ತು ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿ ಬೆಳಗ್ಗೆ ಕೊಂಡೊಯ್ಯುವ ವಾಹನಗಳನ್ನು ಸದ್ಯಕ್ಕೆ ಸೇಫ್​
*ಪ್ರತಿದಿನ ಕನಿಷ್ಠ 200 ರಿಂದ 250 ವಾಹನಗಳಿಗೆ ಸ್ಟಿಕ್ಕರ್​ ಅಂಟಿಸುವ ಕೆಲಸ 
*ಮುಂದಿನ 10 ದಿನಗಳವರೆಗೆ ಸ್ಟಿಕ್ಕರ್​ ಅಂಟಿಸುವ ಪ್ರಕ್ರಿಯೆ 
*ಅದಾದ ಒಂದು ವಾರದ ನಂತರವಷ್ಟೇ ಪೂರ್ಣ ಪ್ರಮಾಣದ ಟೋಯಿಂಗ್​