ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ 
ಬೆಂಗಳೂರು

ಅಧಿವೇಶನಕ್ಕೂ ಮನ್ನ ಮಹಿಳಾ ಮಂತ್ರಿ ಗ್ಯಾರಂಟಿ

ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದಿದ್ದು, ಮಹಿಳಾ ಮಂತ್ರಿ ಇಲ್ಲದ ವಿಚಾರ ವಿವಿಧ ಸಂದರ್ಭದಲ್ಲಿ ಮುನ್ನೆಲೆಗೆ ಬರುತ್ತಿದ್ದು ಅದಕ್ಕೀಗ ತೆರೆ ಎಳೆಯುವ ಪ್ರಯತ್ನಗಳು ನಡೆದಿವೆ.

ಬೆಂಗಳೂರು: ಮುಂದಿನ ವಿಧಾನಮಂಡಲ ಅಧಿವೇಶನದೊಳಗೆ ಸಂಪುಟಕ್ಕೆ ಮಹಿಳಾ ಶಾಸಕಿಯೊಬ್ಬರು ಸೇರ್ಪಡೆ ಆಗುವುದು ಖಚಿತವಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮಿ ಲಾನುಭವಿಗಳ ಜತೆ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಈ ಭರವಸೆ ನೀಡುವ ಮೂಲಕ ಸಿಎಂ ಡಿ.ಕೆ.ಶಿವಕುಮಾರ್ ಸಂಪುಟ ವಿಸ್ತರಣೆಯ ಸುಳಿವು ನೀಡಿದ್ದಾರೆ.

ಮತ್ತೊಂದೆಡೆ ಸಂಪುಟ ಸೇರಲಿರುವ ಅದೃಷ್ಟಶಾಲಿ ಶಾಸಕಿ ಯಾರೆಂಬ ಚರ್ಚೆಗೆ ಚಾಲನೆ ಸಿಕ್ಕಿದ್ದರೆ, ಇತ್ತ ಸಂಪುಟಕ್ಕೆ ಸೇರುವ ಇತರರು ಯಾರು? ಸಂಪುಟಕ್ಕೆ ಸಣ್ಣ ಸರ್ಜರಿ ನಡೆಯುತ್ತದೆಯೇ ಎಂಬ ಚರ್ಚೆಯೂ ಕಾಂಗ್ರೆಸ್ ಪಾಳಯದಲ್ಲಿ ಆರಂಭವಾಗಿದೆ.

ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದಿದ್ದು, ಮಹಿಳಾ ಮಂತ್ರಿ ಇಲ್ಲದ ವಿಚಾರ ವಿವಿಧ ಸಂದರ್ಭದಲ್ಲಿ ಮುನ್ನೆಲೆಗೆ ಬರುತ್ತಿದೆ. ಗಾಯತ್ರಿ ಶಾಂತೇಗೌಡರ ಕೈಗೆ ಬಂದ ಅವಕಾಶ ತಪ್ಪಿ ಹೋಗಿತ್ತು. ಇದೀಗ ಬೆಳಗಾವಿ ಗ್ರಾಮೀಣ ಶಾಸಕಿ, ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ನಡುವೆ ಪೈಪೋಟಿ ಇದ್ದು ಇಬ್ಬರೂ ತಮ್ಮ-ತಮ್ಮ ನೆಲೆಯಲ್ಲಿ ಲಾಬಿ ನಡೆಸಿದ್ದಾರೆ.

ಹೈಕಮಾಂಡ್ ಒಲವು ಯಾರಿಗಿದೆಯೋ ಅವರು ಬೆಳಗಾವಿ ಅಧಿವೇಶನಕ್ಕೆ ಮುಂಚೆ ಡಿಸೆಂಬರ್ 2 ರೊಳಗೆ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೆಬ್ಬಾಳ್ಕರ್ ದಿಲ್ಲಿ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಎಸ್ಟಿ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರೆ ಸಂಡೂರು ಶಾಸಕಿಗೆ ಅದೃಷ್ಟ ಒಲಿಯಬಹುದು.

ಇನ್ನುಳಿದ ಒಂದು ಸ್ಥಾನಕ್ಕೆ ಬ್ಯಾಡಗಿ ಶಾಸಕ ಶಿವಣ್ಣನವರ್, ಬೆಂಗಳೂರಿನ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅಥವಾ ಗೋವಿಂದರಾಜ ನಗರದ ಪ್ರಿಯಾಕೃಷ್ಣ, ಹಿರಿಯರಾದ ಎಚ್.ಕೆ.ಪಾಟೀಲ್ ಹೀಗೆ ಪಟ್ಟಿ ಬೆಳೆಯುತ್ತಿದ್ದು ಚರ್ಚೆ ಜೋರಾಗಿದೆ.

ಪ್ರಭಾವಿ ಸಚಿವರೊಬ್ಬರು ಸೇರಿ ಮೂವರಿಂದ ರಾಜೀನಾಮೆ ಕೊಡಿಸಿ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಆ ಜಾಗಗಳಿಗೆ ಹೊಸಬರಿಗೆ ಅವಕಾಶ ಕಲ್ಪಿಸಲು ಗಂಭೀರ ಯತ್ನ ನಡೆದಿವೆ. ಈ ಸೂತ್ರಕ್ಕೆ ಹೈಕಮಾಂಡ್ ಒಪ್ಪಿಗೆ ಪಡೆಯಲು ಹರಸಾಹಸ ನಡೆದಿದ್ದರೂ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ.

ಹೆಬ್ಬಾಳ್ಕರ್ ಪರ ಗೃಹಲಕ್ಷ್ಮಿಯರ ಬ್ಯಾಟಿಂಗ್

ಹೆಣ್ಣುಮಕ್ಕಳ ಜತೆ ಉತ್ತಮ ಒಡನಾಟ ಹೊಂದಿರುವ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮರು ಅವಕಾಶ ಕಲ್ಪಿಸುವಂತೆ ಬಾಗಲಕೋಟೆ ಭಾಗದ ರೇಣುಕಾ ಮತ್ತಿತರ ಗೃಹಲಕ್ಷ್ಮಿಯರು ಸಿಎಂಗೆ ಮನವಿ ಮಾಡಿದರು.

ಇದಕ್ಕರ ಉತ್ತರಿಸಿದ ಸಿಎಂ, ನನ್ನ ಮೇಲೆ ಪ್ರಭಾವ ಬೀರುವ ಪ್ರಯತ್ನ ಬೇಡ. ಹೈಕಮಾಂಡ್ ಯಾರಿಗೆ ಸೂಚನೆ ನೀಡುತ್ತದೆಯೋ ಅವರು ಸಂಪುಟ ಪ್ರವೇಶಿಸುತ್ತಾರೆ ಎಂದರು.

ಡಿಸೆಂಬರ್ 2ರಿಂದ ಅಧಿವೇಶನ

ಬೆಳಗಾವಿ ಸುವರ್ಣಸೌಧದಲ್ಲಿ ಡಿ.2ರ ಬುಧವಾರದಿಂದ ಡಿ.11ರ ಶುಕ್ರವಾರದವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದೆ. ರಾಜ್ಯಪಾಲೆ ಸುಧಾ ಯಾದವ್ ಅವರ ಆದೇಶದ ಅನುಸಾರ ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಇಲಾಖೆ ಕಾರ್ಯದರ್ಶಿ ಶ್ರೀಧರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಡಿಸೆಂಬರ್ 6ರ ಭಾನುವಾರ ಒಂದನ್ನು ಹೊರತುಪಡಿಸಿ ಶನಿವಾರ ಸೇರಿ ಉಳಿದೆಲ್ಲ ದಿನಗಳಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಿ ವೇಳಾಪಟ್ಟಿ ಪ್ರಕಟಿಸಲಾಗಿದೆ.