ಬೆಂಗಳೂರು:ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಅಭಯ ನೀಡಿ ಸೌಮ್ಯತೆ ಮೆರೆಯುವ ಜತೆಗೆ ಸರ್ಕಾರವನ್ನು ಹೆದರಿಸಲು ಬರಬೇಡಿ ಎಂದು ಪ್ರತಿಭಟನಾನಿರತರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟು ಎಚ್ಚರಿಕೆ ರವಾನಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಕುರಿತು ಬೆಂಗಳೂರಿನ ವಿಧಾನಸೌಧ, ಚನ್ನಪಟ್ಟಣ ಹಾಗೂ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಗುರುವಾರ ಪ್ರತಿಕ್ರಿಯಿಸಿದರು.
ಸರ್ಕಾರ ಅವರ ಪರವಾಗಿದೆ. ಸೂಕ್ತ ಪರಿಹಾರ ಕಲ್ಪಿಸಲು ಆರ್ಥಿಕ ಇಲಾಖೆ ಜತೆ ಮಾತನಾಡುತ್ತೇನೆ. ಅವರು ಕೂಡ ಪ್ರತಿಷ್ಟೆ ಬದಿಗಿಟ್ಟು ಪ್ರತಿಭಟನೆ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸಿಎಂ ವಿನಂತಿಸಿದರು.
ಬೇರೆಯವರು ನಿಮ್ಮನ್ನು ಅವರ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಅರಿವು ನಿಮಗಿರಲಿ. ಆದರೆ ಅವರಾರೂ ನಿಮಗೆ ಸಹಾಯ ಮಾಡಲಾರರು. ಇದು ಬಹಳ ಗಂಭೀರವಾದ ವಿಚಾರ.17 ಸಂಘಟನೆಗಳು ಹೀಗೆ ಪ್ರತಿಭಟಮನೆಗೆ ಮುಂದಾಗಿವೆ ಎಂದರು.
ಗೌರವಧನ ಹೆಚ್ಚಿಸಿಕೊಳ್ಳಲು ಸರ್ಕಾರವನ್ನೇ ಹೆದರಿಸಲು ಬಂದರೆ ಹೇಗೆ? ಎಂದು ಸಿಡುಕು ತೋರಿದ ಸಿಎಂ, ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರಿಗೆ ಲಿಖಿತವಾಗಿ ಬರೆದುಕೊಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಲಿಖಿತವಾಗಿ ಬರೆದುಕೊಡಲು ಇದೇನು ಒಪ್ಪಂದವೇ- ಯಾರ ಬಳಿ ಒಪ್ಪಂದ ಮಾಡಿಕೊಳ್ಳಬೇಕು- ಕೇಂದ್ರ ಸರ್ಕಾರವನ್ನೇಕೆ ಲಿಖಿತ ಉತ್ತರ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಮಾತಿನ ಮೇಲೂ ನಂಬಿಕೆ ಇಲ್ಲ ಎಂದರೆ ನಾನೇನೂ ಮಾಡುವುದಕ್ಕೆ ಆಗುವುದಿಲ್ಲ. ಸರ್ಕಾರಕ್ಕೂ ಒಂದು ಮಿತಿ ಇದೆ ಎಂದು ಗರಂ ಆದರು.
ಇಡೀ ದೇಶ ನಡೆಯುತ್ತಿರುವುದೇ ನಂಬಿಕೆ ಮೇಲೆ. ಇಲ್ಲಿ ವಿಶ್ವಾಸ ಇರಬೇಕು.17 ಇಲಾಖೆಗಳಲ್ಲಿ ಇದೇ ರೀತಿ ಬೇಡಿಕೆಗಳಿವೆ. ಅವರೂ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಿ ಯಶಸ್ವಿ ಆಗುತ್ತೇವೆ ಅಂದು ಕೊಂಡಿದ್ದಾರೆ. ಯಾವುದೇ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಲಾಗದು.
ಆಶಾ ಕಾರ್ಯಕರ್ತರು ಬೇಡಿಕೆ ತಪ್ಪಲ್ಲ. ಗೌರವಧನ ಹೆಚ್ಚಿಸುವಂತೆ ಕೇಳಿದ್ದಾರೆ.ಈಗಾಗಲೇ ಹೆಚ್ಚಿಸಿದ್ದೇವೆ. ಮತ್ತೊಮ್ಮೆ ಈ ಕುರಿತು ನಿರ್ಧಾರ ಮಾಡುತ್ತೇವೆ. ಬೆಳಗಾವಿ ಅಧಿವೇಶನದಲ್ಲೂ ಚರ್ಚಿಸುತ್ತೇವೆ ಎಂದರು.
ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರು ಹಾಗೂ ಅವರಿಗೆ ಬೆಂಬಲ ನೀಡುತ್ತಿರುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರವನ್ನು ಏಕೆ ಪ್ರಶ್ನಿಸುತ್ತಿಲ್ಲ- ಏಕೆ ಒತ್ತಡ ಹೇರುತ್ತಿಲ್ಲ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಬೇಡಿಕೆ ಈಡೇರಿಸುವಲ್ಲಿ ಕೇಂದ್ರದ ಜವಾಬ್ದಾರಿಯೂ ಇಲ್ಲವೇ? ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಈಗಾಗಲೇ ಕೊಟ್ಟಿದ್ದೇವೆ. ಸಮಸ್ಯೆಗೆ ಪರಿಹಾರವನ್ನೂ ಕಲ್ಪಿಸುತ್ತೇವೆ. ಗ್ಯಾರಂಟಿಗಳನ್ನು ನಿಮಗೂ ಅನುಕೂಲ ಆಗುವಂತೆ ಜಾರಿ ಮಾಡಿದ್ದೇವೆ.