- ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪ್ರತಿಪಾದನೆ
- ನಗರ ಅಭಿವೃದ್ಧಿಗೆ ಮಾಜಿ ಮೇಯರ್‌ಗಳಿಂದ ಸಲಹೆಗಳ ಆಲಿಕೆ ಸಭೆ
ಬೆಂಗಳೂರು: ರಾಜಧಾನಿಗೆ ಭಾರಿ ಸಂಕಷ್ಟ ತಂದೊಡ್ಡಿರುವ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ನಾಗರಿಕರಲ್ಲಿ ಸ್ವಯಂಶಿಸ್ತು ಮೂಡಿಸಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಬೆಂಗಳೂರು ನಗರ ಮತ್ತಷ್ಟು ಸಮಸ್ಯೆಗಳ ಜಾಲದಲ್ಲಿ ಸಿಲುಕಬೇಕಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ ಬೆಂಗಳೂರು ಅಭಿವೃದ್ಧಿ ಸಂಬಂಧ ಮಾಜಿ ಮಹಾಪೌರರ ಸಭೆಯಲ್ಲಿ ಸಚಿವರು ಈ ಅನಿಸಿಕೆಯನ್ನು ಹೊರಹಾಕಿದ್ದಾರೆ.
ಎಲ್ಲ ಸರ್ಕಾರಗಳೂ ಬೆಂಗಳೂರಿನಲ್ಲಿ ನಿರಂತರವಾಗಿ ರಸ್ತೆ ನಿರ್ಮಾಣ ಕಾರ್ಯ ನಡೆಸಿವೆ. ಆದರೆ, ಹೀಗೆ ನಿರ್ಮಾಣಗೊಳ್ಳುವ ರಸ್ತೆಗಳ ಪೈಕಿ ಶೇ.60 ಪಾರ್ಕಿಂಗ್‌ಗೆ ಹೋಗುತ್ತಿದೆ. ಸಣ್ಣ ರಸ್ತೆಗಳಲ್ಲೂ ಸಾರ್ವಜನಿಕರು ಎರಡೂ ಕಡೆ ವಾಹನ ನಿಲುಗಡೆ ಮಾಡುತ್ತಿರುವ ಪರಿಣಾಮ ಅಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ಹೋಗಲಾಡಿಸಲು ಬಿಗಿ ಕ್ರಮ ಕೈಗೊಂಡಲ್ಲಿ ರಸ್ತೆ ನಿರ್ಮಿಸಿಯೂ ಜನರಿಂದ ಬೈಸಿಕೊಳ್ಳುವುದು ತಪ್ಪುವುದಿಲ್ಲ ಎಂದರು.
ರಸ್ತೆಗಳಲ್ಲಿ ಶಿಸ್ತುಬದ್ಧವಾಗಿ ಪಾರ್ಕಿಂಗ್ ಸಾಧ್ಯವಾಗಿಸಿದರೆ, ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪುತ್ತದೆ. 2 ಕಿ.ಮೀ. ದೂರದವರೆಗಿನ ಕೆಲಸಕ್ಕೆ ಜನ ಫುಟ್‌ಪಾತ್‌ನಲ್ಲಿ ಓಡಾಡುವಂತೆ ಮೈಕ್ರೋ ಮೊಬಿಲಿಟಿ ವ್ಯವಸ್ಥೆ ಕಲ್ಪಿಸಬೇಕು. ಆದರೆ, ಅಲ್ಲಿಯೂ ಸಮಸ್ಯೆ ಉಂಟಾಗಿದೆ. ಪ್ರಸ್ತುತ ಪಾದಚಾರಿ ಮಾರ್ಗ ತೆರುವುಗೊಳಿಸುತ್ತಿದ್ದು, ಪಾರ್ಕಿಂಗ್ ನಿಯಂತ್ರಿಸದೆ ಹೊಸ ವ್ಯವಸ್ಥೆ ಸಾಧ್ಯವಿಲ್ಲ. ಹೀಗಾಗಿ ಜನ ಸಾಮಾನ್ಯರು ಪಾರ್ಕಿಂಗ್ ವಿಚಾರದಲ್ಲಿ ಶಿಸ್ತು ಪಾಲಿಸುವಂತೆ ನೋಡಿಕೊಳ್ಳಬೇಕಿದೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್, ಮಾಜಿ ಮೇಯರ್‌ಗಳಾದ ಎಂ. ರಾಮಚಂದ್ರಪ್ಪ, ಜೆ. ಹುಚ್ಚಪ್ಪ, ಮುಮ್ತಾಜ್ ಬೇಗಂ, ಕೆ.ಚಂದ್ರಶೇಖರ್, ಜಿ. ಪದ್ಮಾವತಿ, ಬಿ.ಎಸ್. ಸತ್ಯನಾರಾಯಣ, ಎಸ್.ಕೆ. ನಟರಾಜ್, ಡಿ.ವೆಂಕಟೇಶ್‌ಮೂರ್ತಿ, ಶಾಂತಕುಮಾರಿ, ಮಂಜುನಾಥ್ ರೆಡ್ಡಿ, ಆರ್.ಸಂಪತ್‌ರಾಜ್, ಗಂಗಾಂಬಿಕೆ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾಜಿ ಮೇಯರ್‌ಗಲು ನೀಡಿದ ಕೆಲ ಸಲಹೆ:
* ರಸ್ತೆ ಗುಂಡಿಗಳನ್ನು ವೈಜ್ಙಾನಿಕವಾಗಿ ಮುಚ್ಚಬೇಕು
* ಕಸದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸಬೇಕು
* ಬೃಹತ್ ನೀರುಗಾಲುವೆಗಳ ಅಭಿವೃದ್ಧಿಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು
* ಸಾರ್ವಜನಿಕ ಶೌಚಾಲಯ ನಿರ್ವಹಣೆ, ಬೀದಿ ದೀಪಗಳ ದುರಸ್ತಿ ಮಾಡಬೇಕು
* ಡಾಂಬರೀಕರಣಕ್ಕೆ ಗುತ್ತಿಗೆದಾರರನ್ನು ಅವಲಂಬಿಸುವ ಬದಲು ಪಾಲಿಕೆಗೊಂದು ಪ್ರತ್ಯೇಕ ಘಟಕ ನಿರ್ಮಾಣ
* ರಸ್ತೆ ಬದಿ ತ್ಯಾಜ್ಯ ಬಿಸಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವುದು
* ತಿಂಗಳಿಗೊಮ್ಮೆ ಇ-ಖಾತಾ ಮೇಳ ಆಯೋಜಿಸಿದರೆ ಪಾಲಿಕೆಗೆ ಹೆಚ್ಚು ಆಸ್ತಿತೆರಿಗೆ ಬರಲಿದೆ
* ಕಲ್ಯಾಣ ಕಾರ್ಯಕ್ರಮಗಳಡಿ ಒಂಟಿ ಮನೆ ಯೋಜನೆ ಅನುಷ್ಠಾನಕ್ಕೆ ತರಬೇಕು
* ಮರಗಳ ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆ ನಡೆಸಬೇಕು.