- ಯುವಕನ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದು
ಬೆಂಗಳೂರು: ಪರಸ್ಪರ ಒಪ್ಪಿಗೆಯಿಂದ ಇಬ್ಬರು ವಯಸ್ಕರ ನಡುವೆ ಇದ್ದ ದೀರ್ಘಕಾಲದ ಪ್ರೇಮ ಸಂಬಂಧ ಮುರಿದುಬಿದ್ದ ತಕ್ಷಣ ಅದಕ್ಕೆ ಕ್ರಿಮಿನಲ್ ಬಣ್ಣ ಬಳಿಯುವುದು ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.
ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಲಾಗಿದೆ ಎಂಬ ಆರೋಪದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಮುನೇಂದ್ರ ಎಂಬವರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಆರಂಭದಿಂದಲೂ ಮದುವೆಯಾಗುವ ಉದ್ದೇಶವಿಲ್ಲದೆ, ವಂಚಿಸುವ ಉದ್ದೇಶದಿಂದ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸುವುದು ಅಪರಾಧವಾಗುತ್ತದೆ. ಆದರೆ, ಆತ್ಮೀಯವಾಗಿದ್ದ ಸಂಬಂಧವು ಯಾವುದೋ ಕಾರಣದಿಂದ ಮುರಿದು ಬಿದ್ದರೆ ಅದನ್ನು ವಂಚನೆ ಎಂದು ಪರಿಗಣಿಸಲಾಗುದು ಎಂದು ನ್ಯಾಯಪೀಠ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಪುನರುಚ್ಚರಿಸಿದೆ.
ಏನಿದು ಪ್ರಕರಣ?:
ದೊಡ್ಡಬಳ್ಳಾಪುರ ತಾಲೂಕಿನ ಕುರುಬರಹಳ್ಳಿಯ ಮುನೇಂದ್ರ ಎಂಬುವರ ಮಾಲೀಕತ್ವದ ಮನೆಯಲ್ಲಿ ದೂರುದಾರ ಮಹಿಳೆಯು ಬಾಡಿಗೆಗೆ ಇದ್ದಳು. ಈ ವೇಳೆ ಇಬ್ಬರ ನಡುವೆ ಪರಿಚಯಗೊಂಡು ಪ್ರೇಮ ಸಂಬಂಧ ಬೆಳೆದಿತ್ತು. ಸುಮಾರು ಎರಡು ವರ್ಷಗಳ ಕಾಲ ಇಬ್ಬರೂ ಪ್ರೀತಿಯಲ್ಲಿದ್ದು, ಅದು ದೈಹಿಕ ಸಂಪರ್ಕಕ್ಕೆ ತಿರುಗಿತ್ತು. ಆದರೆ, ನಂತರ ಉಂಟಾದ ಮನಸ್ತಾಪದಿಂದ ಸಂಬಂಧ ಮುರಿದುಬಿದ್ದಿತ್ತು. ಆ ಬಳಿಕ 2021ರಲ್ಲಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯು ಪ್ರಕರಣ ದಾಖಲಿಸಿದ್ದಳು.
ℹ️ ಮಹಿಳೆಗೆ ಬೇರೆ ಮದುವೆ
ಅರ್ಜಿದಾರರ ಪರ ವಾದಿಸಿದ್ದ ವಕೀಲರು, ಇಬ್ಬರ ನಡುವೆ ಪರಸ್ಪರ ಒಪ್ಪಿಗೆಯ ಸಂಬಂಧ ಇತ್ತು. ಆ ನಂತರ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ದೂರುದಾರ ಮಹಿಳೆಯು ಈಗಾಗಲೇ ಬೇರೆಯವರನ್ನು ಮದುವೆಯಾಗಿದ್ದಾರೆ ಎಂದು ತಿಳಿಸಿದ್ದರು. ದೂರುದಾರರ ಪರ ವಕೀಲರು ಸಹ, ಮಹಿಳೆಗೆ ಈಗಾಗಲೇ ಮದುವೆಯಾಗಿರುವುದರಿಂದ ಈ ಪ್ರಕರಣ ಮುಂದುವರಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದರು. ಇದನ್ನು ಪರಿಗಣಿಸಿ ಎಫ್ಐಆರ್ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.