- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಆತ್ಮ ನಿರ್ಭರ ಭಾರತಕ್ಕೆ’ ಒತ್ತು
- ರಕ್ಷಣಾ ಇಲಾಖೆಯ ಸಾಮಾಗ್ರಿಗಳನ್ನು ಶೇ.90 ದೇಶೀಯ ಕೈಗಾರಿಕೆಗಳು ಪೂರೈಕೆ
- ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ
ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಆತ್ಮ ನಿರ್ಭರ ಭಾರತಕ್ಕೆ’ ಒತ್ತು ನೀಡಿದ್ದು, ರಕ್ಷಣಾ ಇಲಾಖೆಯ ಸಾಮಾಗ್ರಿಗಳನ್ನು (defense product) ಶೇ.90 ದೇಶೀಯ ಕೈಗಾರಿಕೆಗಳು ಪೂರೈಸುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಲಘು ಉದ್ಯೋಗ ಭಾರತಿ,ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಆಯೋಜಿಸಿರುವ 3 ದಿನಗಳ ಇಂಡಿಯಾ ಮಾನ್ಯುಫ್ಯಾಕ್ಚರಿಂಗ್ ಶೋ (ಐಎಂಎಸ್) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೆ ಶೇ.70 ರಷ್ಟು ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಸ್ಥಳೀಯ ಕೈಗಾರಿಕೆಗಳು ಉತ್ಪನ್ನಗಳನ್ನು ಉತ್ಪಾದಿಸಿ ಇಲಾಖೆಗೆ ಸರಬರಾಜು ಮಾಡುತ್ತಿವೆ. ಇದು ಕೇವಲ ಆರ್ಥಿಕ ಪ್ರಗತಿಯಲ್ಲ, ಭಾರತದ ಸಾರ್ವಭೌಮತ್ವದ ಪ್ರತಿಪಾದನೆಯಾಗಿದೆ ಎಂದರು.
ಮೋದಿ ಅವರ ನಾಯಕತ್ವದಲ್ಲಿ ದೇಶದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ವಿಮಾನ ನಿಲ್ದಾಣದಿಂದ ಇಲ್ಲಿಗೆ ಕಾರಿನಲ್ಲಿ ಆಗಮಿಸುವ ಬಾಡಿಗೆಗಿಂತ ಕಡಿಮೆ ವೆಚ್ಚದಲ್ಲಿ ಇಂದು ನಮ್ಮ ಇಸ್ರೋ ಉಪಗ್ರಹಗಳನ್ನು ಉಡಾಯಿಸುತ್ತಿದೆ. ದೇಶದ ಯುವ ಜನತೆ, ಕೈಗಾರಿಕೋದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರಿಂದ ದೇಶದಲ್ಲಿ ಇಷ್ಟೆಲ್ಲಾ ಬದಲಾವಣೆಯಾಗಿದೆ. ಉತ್ತಮ ಕಾನೂನು ಸುವ್ಯವಸ್ಥೆ, ನೀರು, ವಿದ್ಯುತ್, ರಸ್ತೆ, ಬಂದರು, ವಿಮಾನ ನಿಲ್ದಾಣ ಸೇರಿ ಇತರ ವ್ಯವಸ್ಥೆ ಕಲ್ಪಿಸಿದ್ದರಿಂದ ಸಣ್ಣ, ಅತಿ ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಗಳ ಸಾಕಷ್ಟು ಅನುಕೂಲವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಂಸದ ತೇಜಸ್ವಿ ಸೂರ್ಯ, ಡಿಆರ್‌ಡಿಒ ಚೇರ್ಮನ್ ಡಾ.ಸಮೀರ್ ವಿ.ಕಾಮತ್, ಭರತ್ ಫೋರ್ಜ್‌ನ ಮುಖ್ಯಸ್ಥ ಬಾಬು ಕಲ್ಯಾಣಿ, ಎಲ್ ಅಂಡ್ ಟಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರುಣ್ ರಾಮ್‌ಚಂದಾನಿ ಮತ್ತಿತರರಿದ್ದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಕಾರ್ಯಾಚರಣೆಯಲ್ಲಿ ಬಳಸುವ ಶೇ.80 ರಷ್ಟು ವಸ್ತುಗಳು ದೇಶೀಯವಾಗಿವೆ. ಭಾರತೀಯ ಉದ್ಯಮವು ಇಸ್ರೋಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಅಧ್ಯಕಷ ಡಾ.ವಿ.ನಾರಾಯಣನ್ ಹೇಳಿದರು. ಭಾರತೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು(ಎಂಎಸ್‌ಎಂಇ), ಸ್ಟಾರ್ಟಾಪ್‌ಗಳ ಶೇ.80 ರಿಂದ 85 ರಷ್ಟು ಉತ್ಪನ್ನಗಳನ್ನು ಇಸ್ರೋದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅವಲಂಬನೆಯಿಂದ ಸ್ವಾವಲಂಬನೆಗೆ ದೇಶದ ರೂಪಾಂತರವನ್ನು ಇದು ಪ್ರತಿಬಿಂಬಿಸುತ್ತದೆ. ನಮ್ಮ ಬಾಹ್ಯಾಕಾಶ ಕಾರ್ಯಕ್ರಮದ ಬಲವು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಮಾತ್ರವಲ್ಲದೆ ಭಾರತೀಯ ಉತ್ಪಾದನೆಯ ಶಕ್ತಿಯಲ್ಲಿದೆ. ನ.2 ರಂದು ಭಾರತದ ಅತ್ಯಂತ ಭಾರವಾದ ರಾಕೆಟ್ ಬಾಹುಬಲಿಯಲ್ಲಿ ಸಂವಹನ ಉಪಗ್ರಹದ ಯಶಸ್ವಿ ಉಡಾವಣೆಯು ಇದರ ಸಂಕೇತವಾಗಿದೆ. 450 ಕ್ಕೂ ಅಧಿಕ ಭಾರತೀಯ ಕಂಪೆನಿಗಳೊಂದಿಗೆ ಇಸ್ರೋ ಪಾಲುದಾರಿಕೆ ಹೊಂದಿದೆ ಎಂದರು.
ಸ್ವಹಿತಾಸಕ್ತಿ ಇಲ್ಲದೆ ಸಮಾಜ ಮತ್ತು ಉದ್ಯಮಕ್ಕೆ ಸೇವೆ ಸಲ್ಲಿಸುವಲ್ಲಿ ಲಘು ಉದ್ಯೋಗ ಭಾರತಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಸ್ಫೂರ್ತಿ ಪಡೆದಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ರಾಜನಾಥ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭಕ್ಕೆ ವಿಡಿಯೋ ಸಂದೇಶ ಕಳುಹಿಸಿದ್ದ ಅವರು, ರಾಷ್ಟ್ರ ಮೊದಲು ಎಂಬ ಮನೋಭಾವದೊಂದಿಗೆ ದೇಶದ ಸೇವೆಗೆ ನೂರು ವರ್ಷದಿಂದ ಆರ್‌ಎಸ್‌ಎಸ್ ಸಮರ್ಪಿತವಾಗಿದೆ. ಲಘು ಉದ್ಯೋಗ ಭಾರತಿಯು ಆರ್‌ಎಸ್‌ಎಸ್‌ನಿಂದ ಸ್ಫೂರ್ತಿ ಪಡೆದಿದೆ. ನಾನು ಸಂಘ ಪರಿವಾರದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿರುವುದು ನನ್ನ ಅದೃಷ್ಟವಾಗಿದೆ. ಈ ಹಿಂದೆಯೂ, ಇಂದಿಗೂ ಮತ್ತು ನಾನು ಬದುಕಿರುವವರೆಗೂ ಆರ್‌ಎಸ್‌ಎಸ್ ಜೊತೆ ಸಂಪರ್ಕದಲ್ಲಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಉದ್ಯಮಿ ಪೋರ್ಟಲ್‌ನಲ್ಲಿ 7 ಕೋಟಿಗೂ ಅಧಿಕ ಎಂಎಸ್‌ಎಂಇಗಳು ನೋಂದಣಿಯಾಗಿವೆ. ಹಿಂದೆ ದೇಶದಲ್ಲಿ ಎಂಎಸ್‌ಎಂಇ ಎಷ್ಟಿವೆ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ.ಕೇಂದ್ರ ಸರ್ಕಾರ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದರಿಂದಾಗಿ ಕೈಗಾರಿಕೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆಯಡಿ ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದ್ದು,ಅಗತ್ಯ ಸಬ್ಸಿಡಿ ನೀಡಲಾಗಿದೆ. ದೇಶದಲ್ಲಿ ಕೃಷಿ ಕ್ಷೇತ್ರ 50 ಕೋಟಿಗೂ ಅಧಿಕ ಉದ್ಯೋಗ ಕಲ್ಪಿಸಿದ್ದರೆ, ಎಂಎಸ್‌ಎಂಇ 30 ಕೋಟಿಗೂ ಅಧಿಕ ಉದ್ಯೋಗ ನೀಡಿದೆ.
- ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ.