ಬೆಂಗಳೂರು: ರಾಜಧಾನಿಯ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ ಒದಗಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ನಿರ್ಧರಿಸಿದೆ.
ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ಕೊನೆಯ ಮೈಲಿ ಸಂಪರ್ಕ ಉತ್ತೇಜಿಸಲು ಮತ್ತು ಸಂಚಾರ ಸಿಕ್ಕಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸೈಕ್ಲಿಂಗ್ಗೆ ಒತ್ತು ನೀಡಲು ಮುಂದಾಗಿದೆ. ಫೆ. 9ರವರೆಗೆ ಟೆಂಡರ್ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಬಳಿಕ ನಿರ್ವಹಣಾ ಸಂಸ್ಥೆಯನ್ನು ಅಂತಿಮಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ನಿಲುಗಡೆಗೆ ಗಂಟೆಗೆ ಒಂದು ರೂ. ಮತ್ತು ದಿನಕ್ಕೆ ಗರಿಷ್ಠ 10 ರೂ. ಶುಲ್ಕ ವಿಧಿಸಲಾಗುತ್ತಿದೆ. ಸೈಕಲ್ ಪ್ರಯಾಣಿಕರು ಹೆಚ್ಚು ಬಳಸುವ ನಿಲ್ದಾಣಗಳನ್ನು ಗುರುತಿಸಿ ಈ ಉಚಿತ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸದ್ಯಕ್ಕೆ ಈ ಸೌಲಭ್ಯವು ಕೇವಲ ಒಂಬತ್ತು ನಿಲ್ದಾಣಗಳಿಗೆ ಮಾತ್ರ ಅನ್ವಯವಾಗಲಿದ್ದು, ಉಳಿದ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಯಥಾಸ್ಥಿತಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಯಾವೆಲ್ಲ ನಿಲ್ದಾಣಗಳಲ್ಲಿ ಅವಕಾಶ
ನಮ್ಮ ಮೆಟ್ರೋದ ಮೂರು ಮಾರ್ಗಗಳ ಪ್ರಮುಖ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ಗೆ ಅವಕಾಶ ಮಾಡಿ ಕೊಡಲಾಗಿದೆ. ಅದರಲ್ಲಿ ನೇರಳೆ ಮಾರ್ಗದ ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ಹಸಿರು ಮಾರ್ಗದ ಮಾದಾವರ, ಪೀಣ್ಯ ಇಂಡಸ್ಟ್ರಿ, ಜೆ.ಪಿ. ನಗರ ಹಾಗೂ ಹಳದಿ ಮಾರ್ಗದ ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ಸ್ ಸಿಟಿ, ರಾಗಿಗುಡ್ಡ ಮತ್ತು ಜಯದೇವ ಆಸ್ಪತ್ರೆ ನಿಲ್ದಾಣ ಒಳಗೊಂಡಿದೆ.