road-development 
ಬೆಂಗಳೂರು

3 ವರ್ಷದಲ್ಲಿ ರಸ್ತೆ ಅಭಿವೃದ್ಧಿಗೆ 8,825 ಕೋಟಿ ಖರ್ಚು !

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ರಸ್ತೆಗಳು ಗುಂಡಿಮುಕ್ತವಾಗದಿರುವ ಬಗ್ಗೆ ಆಕ್ಷೇಪ
  • ಅನುದಾನ ದುರ್ಬಳಕೆ ಬಗ್ಗೆ ತನಿಖೆ ನಡೆಸಲು ಸಚಿವರಿಗೆ ದೂರು
ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ವಿವಿಧ ಅನುದಾನ ಅಡಿಯಲ್ಲಿ ಬಿಡುಗಡೆಯಾಗಿರುವ 8,825 ಕೋಟಿ ರೂ. ಮೊತ್ತವು ರಸ್ತೆ ಅಭಿವೃದ್ಧಿ ಹಾಗೂ ಗುಂಡಿ ಮುಚ್ಚುವಿಕೆಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಅವರು ಸಚಿವ ಕೃಷ್ಣಬೇರೇಗೌಡಗೆ ದೂರು ಸಲ್ಲಿಸಿದ್ದಾರೆ.
2023ರ ಏ.1ರಿಂದ 2026ರ ಮೇ 31ರವರೆಗೆ ಕಾರ್ಪೋರೇಷನ್ ವ್ಯಾಪ್ತಿಯ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳು ಸೇರಿ ಪ್ರಮುಖ ರೋಡ್‌ಗಳ ಅಭಿವೃದ್ಧಿಗೆ ಇಷ್ಟೊಂದು ಬೃಹತ್ ಮೊತ್ತವು ಬಿಡುಗಡೆಯಾಗಿದೆ. ಈ ಪೈಕಿ, ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ 8,230 ಕೋಟಿ ರೂ. ಹಾಗೂ ರಸ್ತೆಗುಂಡಿಗಳನ್ನು ಮುಚ್ಚಲು 594 ಕೋಟಿ ರೂ. ಸೇರಿದೆ. ಈ ಅನುದಾನವನ್ನು ಅಧಿಕಾರಿಗಳು ಸದ್ಬಳಕೆ ಮಾಡಿದ್ದರೆ ಕನಿಷ್ಠ 10 ವರ್ಷ ಕಾಲ ಸಧೃಢ ಹಾಗೂ ವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸಬಹುದಿತ್ತು. ಆದರೆ, ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಕಾರಣ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.

ಪ್ರತಿ ಹಂತದಲ್ಲೂ ಕಮಿಷನ್?:

ಕಾಮಗಾರಿಯ ಟೆಂಡರ್ ಪ್ರಕ್ರಿಯೆ, ಬಿಲ್ ರಿಜಿಸ್ಟ್ರರ್ ನಮೂದು, ಗುಣಮಟ್ಟ ನಿಯಂತ್ರಣ ವಿಭಾಗ/ಟಿವಿಸಿಸಿ ವರದಿ ಮತ್ತು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಪ್ರತಿಯೊಂದು ಹಂತದಲ್ಲೂ ಎಇ, ಜೆಇ ಸಹಿತ ಇನ್ನಿತರ ಅಧಿಕಾರಿಗಳು ಸೇರಿ 12 ಹಂತಗಳಲ್ಲಿ ಶೇ.30ಕ್ಕಿಂತಲೂ ಹೆಚ್ಚು ಪ್ರಮಾಣದ ಲಂಚ ನೀಡಿದರಷ್ಟೇ ಕಾಮಗಾರಿಯ ಕಡತವು ಅನುಮೋದನೆಯಾಗುತ್ತದೆ. ಜತೆಗೆ ಜನಪ್ರತಿನಿಧಿಗಳಿಗೂ ಕಮಿಷನ್ ಹಣವನ್ನು ಗುತ್ತಿಗೆದಾರ ತಲುಪಿಸಬೇಕಿದೆ. ಹಾಗಾಗಿ ರಾಜಧಾನಿಯ ರಸ್ತೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಎನ್​​.ಆರ್​​. ರಮೇಶ್ ಅವರು ಸಚಿವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕಾರಣಗಳಲ್ಲದೆ ಕಳಪೆ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಕಚ್ಛಾ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ದೇಶದ ಬೇರೆಲ್ಲಾ ಮಹಾನಗರಗಳಿಗಿಂತಲೂ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿಗಳು ಬೆಂಗಳೂರಿನಲ್ಲಿ ನಡೆಯುವಂತಾಗಿದೆ ಎಂದು ಅವರು ಸಚಿವರ ಗಮನಕ್ಕೆ ತಂದಿದ್ದಾರೆ.

ಉನ್ನತಮಟ್ಟದ ತನಿಖೆ ನಡೆಸಲು ಆಗ್ರಹ:

ಪ್ರಸ್ತುತ ಬೆಂಗಳೂರಿನ ರಸ್ತೆಗಳು ದುಸ್ಥಿತಿಯಲ್ಲಿರುವಾಗ 3 ವರ್ಷದಲ್ಲಿ ಬಿಡುಗಡೆಯಾಗಿರುವ 8,825 ಕೋಟಿ ರೂ. ಅನುದಾನ ಎಲ್ಲಿಗೆ ಹೋಯ್ತು ? ಎಂಬುದನ್ನು ಪತ್ತೆ ಹೆಚ್ಚಲು ಉನ್ನತಮಟ್ಟದ ತನಿಖೆ ನಡೆಸಬೇಕು. ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ 1,049 ಪುಟಗಳ ದಾಖಲೆಯನ್ನು ಸಚಿವ ಕೃಷ್ಣ ಭೈರೇಗೌಡರಿಗೆ ಸಲ್ಲಿಸಿದ್ದು, ತನಿಖೆ ನಡೆಸುವ ಭರವಸೆ ನೀಡಿದ್ದಾರೆಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ.