- ಯೋಜನೆಗೆ ಸಮ್ಮತಿ ನೀಡದ ಸರ್ಕಾರ
- 500 ಎಂಎಲ್ಡಿ ಹೆಚ್ಚುವರಿ ನೀರು ನಗರಕ್ಕೆ ಸರಬರಾಜು ನಿರೀಕ್ಷೆ
- 2030ರೊಳಗೆ ಮೇಕೆದಾಟಿನಿಂದ 4.25 ಟಿಎಂಸಿ ನೀರು ಲಭ್ಯತೆ ಅಂದಾಜು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪ್ರತಿದಿನ ರಾಜಧಾನಿಗೆ ಕೆಆರ್ಎಸ್ನಿಂದ 500 ಎಂಎಲ್ಡಿ ಹೆಚ್ಚುವರಿ ನೀರು ಸರಬರಾಜು ಮಾಡುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ 6ನೇ ಹಂತದ ಯೋಜನೆ ರೂಪಿಸಿದ್ದು, ಡಿಪಿಆರ್ ಸಲ್ಲಿಕೆಯಾಗಿ 9 ತಿಂಗಳು ಕಳೆದರೂ ಸರ್ಕಾರದಿಂದ ಇನ್ನು ಅನುಮೋದನೆ ಲಭಿಸದೆ ವಿಳಂಬವಾಗಿದೆ.
2030ರ ಒಳಗಾಗಿ ಮೇಕೆದಾಟುವಿನಿಂದ ವಾರ್ಷಿಕವಾಗಿ 4.25 ಟಿಎಂಸಿ ನೀರನ್ನು ತರುವ ಯೋಜನೆ ಬಗ್ಗೆಯೂ ಜಲಮಂಡಳಿ ಚಿಂತನೆ ನಡೆಸುತ್ತಿದ್ದು, ಈ ಎರಡು ಬೃಹತ್ ನೀರು ಸರಬರಾಜು ಯೋಜನೆಗಳು ಬೆಂಗಳೂರಿನ ಉಪನಗರಗಳು ಹಾಗೂ ಹೊರವಲಯದ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದೆ.
ಮಹಾನಗರದ ಹೊರವಲಯದಲ್ಲಿನ ಬಡಾವಣೆಗಳು ಹಾಗೂ ಸುತ್ತಲಿನ ಚಿಕ್ಕಬಾಣಾವರ, ಹುಣಸಮಾರನಹಳ್ಳಿ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ಬಾಶೆಟ್ಟಿಹಳ್ಳಿ, ಮಾದನಾಯಕನಹಳ್ಳಿ, ವಿಜಯಪುರಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ ಕಾವೇರಿ 6ನೇ ಹಂತದ ಯೋಜನೆ ರೂಪಿಸಲಾಗಿದೆ.
ಕಾವೇರಿಯಿಂದ ನಗರದ ಜನತೆಯ ನೀರಿನ ದಾಹ ತಣಿಸಲು ಪ್ರತಿ 10 ವರ್ಷಕ್ಕೊಂದು ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದು ರೂಢಿ. ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಿಂದ 775 ಎಂಎಲ್ಡಿ ನೀರು ಪೂರೈಕೆಯ ಕಾವೇರಿ 5ನೇ ಹಂತದ ಯೋಜನೆಗೆ 2014ರಲ್ಲಿ ಚಾಲನೆ ನೀಡಲಾಯಿತು. ಕಾಮಗಾರಿ ಪೂರ್ಣಕ್ಕೆ 10 ವರ್ಷ ಕಾಲಾವಕಾಶ ತೆಗೆದುಕೊಂಡು 2024ರ ಅಕ್ಟೊಬರ್ನಲ್ಲಿ ನೀರು ಸರಬರಾಜು ಮಾಡಲಾಯಿತು.
ಕಾವೇರಿ 6ನೇ ಹಂತ: ಬೆಂಗಳೂರು ಜಲಮಂಡಳಿಯು 6ನೇ ಹಂತದ ಯೋಜನೆಯಡಿ ವಾರ್ಷಿಕವಾಗಿ 6 ಟಿಎಂಸಿ ನೀರನ್ನು 140 ಕಿ.ಮೀ. ದೂರದ ಕೆಆರ್ಎಸ್ನಿಂದ ನಗರಕ್ಕೆ ತರಲು ಯೋಜನೆ ರೂಪಿಸಿದೆ. ಸುಮಾರು 6,939 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಯೋಜನೆಗೆ 5,177 ಕೋಟಿ ರೂ. ಹಾಗೂ ಭೂಸ್ವಾಧಿನಕ್ಕೆ 1,822 ಕೋಟಿ ರೂ. ನಿಗದಿಪಡಿಸಿದೆ. ಯೋಜನೆಗೆ ಅಗತ್ಯವಿರುವ ಹಣ ಹೊಂದಿಸಲು ಜಲಮಂಡಳಿಯು ವಿಶ್ವಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗಿದೆ. ರಾಜ್ಯ ಸರ್ಕಾರವು ಯೋಜನೆಗೆ ಒಪ್ಪಿಗೆ ಸೂಚಿಸಿದ ಕೂಡಲೇ ಸಾಲ ಕೋರಲು ನಿರ್ಧರಿಸಿದ್ದು, ಯೋಜನೆಯನ್ನು ಶ್ರೀ ಪ್ರಾರಂಭಿಸುವುದಾಗಿ ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಯಾವ್ಯಾವ ಪ್ರದೇಶಗಳಿಗೆ ನೀರು?
ಕಾವೇರಿ 6ನೇ ಹಂತದ ಯೋಜನೆಯಡಿ ಹಂಚಿಕೆಯಾಗಿರುವ 6 ಟಿಎಂಸಿ ನೀರಿನ ಪೈಕಿ, 4 ಟಿಎಂಸಿಯನ್ನು ಶಿವರಾಮ ಕಾರಂತ ಬಡಾವಣೆ, ಕೆಂಪೇಗೌಡ ಬಡಾವಣೆ ಸೇರಿ ಇತರೆ ಪ್ರದೇಶಗಳು ಹಾಗೂ ಉಳಿದ 2 ಟಿಎಂಸಿ ನೀರನ್ನು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೇಡಿಕೆ ಅನುಸಾರ ಚಿಕ್ಕಬಾಣಾವರ, ಮಾದನಾಯಕನಹಳ್ಳಿ, ಹುಣಸಮಾರನಹಳ್ಳಿ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ವಿಜಯಪುರ, ಬಾಶೆಟ್ಟಿಹಳ್ಳಿಗೆ ಸರಬರಾಜು ಮಾಡಲು ತೀಮಾರ್ನಿಸಲಾಗಿದೆ ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.