- ಸಾರ್ವಜನಿಕರಿಂದ ಸಲಹೆಗಳಿಗೆ ಆಹ್ವಾನ
- ಸಂಪನ್ಮೂಲ ಆಧರಿಸಿ ಆಯವ್ಯಯ ಮಂಡನೆ
ಬೆಂಗಳೂರು: ಮಹಾನಗರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪಂಚ ನಗರ ಪಾಲಿಕೆಗಳು ತಮ್ಮ ಚೊಚ್ಚಲ ಆಯವ್ಯಯ ಸಿದ್ಧಪಡಿಸಲು ಚಾಲನೆ ನೀಡಿದ್ದು, ನಾಗರಿಕರ ಆಶಯಕ್ಕೆ ಸ್ಪಂದಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಭರವಸೆ ನೀಡಲಾಗಿದೆ.
ನಿಕಟಪೂರ್ವ ಬಿಬಿಎಂಪಿಯನ್ನು ವಿಂಗಡಿಸಿ ಐದು ಕಾರ್ಪೋರೇಷನ್‌ಗಳನ್ನಾಗಿ ವಿಂಗಡಿಸಿದ ಬಳಿಕ ಇದೇ ಮೊದಲ ಬಾರಿಗೆ ಆಯಾ ಪಾಲಿಕೆಗಳು ಸ್ವತಂತ್ರವಾಗಿ ಬಜೆಟ್ ಸಿದ್ಧಪಡಿಸುವ ಅಧಿಕಾರ ಹೊಂದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಬಿಎ ಮುಖ್ಯಸ್ಥರು ಐದೂ ಪಾಲಿಕೆಗಳ ಆಯುಕ್ತರ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. ಇದನ್ನಾಧರಿಸಿ ಕಾರ್ಪೋರೇಷನ್‌ಗಳು ತಮ್ಮ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಸಂಪನ್ಮೂಲ ಆಧರಿಸಿ ಬಜೆಟ್ ತಯಾರಿ ಆರಂಭಿಸಿದ್ದಾರೆ.
ಕಳೆದ ಸೆ.2ರಿಂದ ಐದು ಪಾಲಿಕೆಗಳು ಅಧಿಕೃತವಾಗಿ ಕಾರ್ಯಾರಂಭ ಮಾಡಿವೆ. ಅಕ್ಟೋಬರ್‌ನಲ್ಲಿ ಆರ್ಥಿಕ ವರ್ಷದ ಉಳಿದ ಅವಧಿಗೆ ಒಟ್ಟು 7,977.8 ಕೋಟಿ ರೂ. ಮೊತ್ತವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಪೂರ್ವ ಪಾಲಿಕೆ ಅತಿಹೆಚ್ಚು 1,766 ಕೋಟಿ ರೂ. ಅನುದಾನ ಪಡೆದುಕೊಂಡಿತು. ಉಳಿದಂತೆ ಪಶ್ಚಿಮ ಪಾಲಿಕೆ-1,710.6 ಕೋಟಿ ರೂ., ಉತ್ತರ ಪಾಲಿಕೆ-1,599.6 ಕೋಟಿ ರೂ., ದಕ್ಷಿಣ ಪಾಲಿಕೆ -1,423.2 ಕೋಟಿ ರೂ. ಹಾಗೂ ಕೇಂದ್ರ ಪಾಲಿಕೆಗೆ 1,478.4 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಈ ಪೈಕಿ ತ್ರೈಮಾಸಿಕ ಅವಧಿಯನ್ವಯ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಈ ಹಣವನ್ನು ವಿವಿಧ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ.
ಬಜೆಟ್ ಗಾತ್ರ 25 ಸಾವಿರ ಕೋಟಿ ರೂ.?
ಐದು ಪಾಲಿಕೆಗಳು 2026-27ನೇ ಆರ್ಥಿಕ ಸಾಲಿಗೆ ಒಟ್ಟು 25 ಕೋಟಿ ರೂ. ಮೊತ್ತದ ಆಯವ್ಯಯ ಮಂಡಿಸುವ ಸಾಧ್ಯತೆ ಇದೆ. ಆಯಾ ಕಾರ್ಪೋರೇಷನ್‌ಗಳಲ್ಲಿ ಆಸ್ತಿತೆರಿಗೆ ಹಾಗೂ ಇತರ ತೆರಿಗೆ ಆಧರಿಸಿ ಬಜೆಟ್ ಗಾತ್ರವನ್ನು ನಿಗದಿ ಮಾಡುವ ಕಸರತ್ತು ಆರಂಭಗೊಂಡಿದೆ. ಆಯಾ ಪಾಲಿಕೆಗಳು 4-6 ಸಾವಿರ ಕೋಟಿ ರೂ. ಬಜೆಟ್ ಸಿದ್ಧಪಡಿಸುವತ್ತ ಲಕ್ಷ್ಯ ಹರಿಸಿದೆ.
ಪೂರ್ವ ಪಾಲಿಕೆಯಲ್ಲಿ ಹೆಚ್ಚು ಸಂಪನ್ಮೂಲ ಸಂಗ್ರಹವಾಗುವ ಕಾರಣ ಆ ಕಾರ್ಪೋರೇಷನ್ 6 ಸಾವಿರ ಕೋಟಿ ರೂ. ಮೊತ್ತದ ಆಯವ್ಯಯ ರೂಪಿಸುವ ಚಿಂತನೆ ನಡೆಸಿದೆ. ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಕಡಿಮೆ ತೆರಿಗೆ ವಸೂಲಾಗುವ ಕಾರಣ 4 ಸಾವಿರ ಕೋಟಿ ರೂ. ಸೀಮಿತವಾಗುವ ಸಾಧ್ಯತೆ ಇದೆ. ಉತ್ತರ, ದಕ್ಷಿಣ ಹಾಗೂ ಪಶ್ಚಿಮ ತಲಾ 5 ಸಾವಿರ ಕೋಟಿ ರೂ. ಆಸುಪಾಸಿನಲ್ಲಿ ಬಜೆಟ್ ರೂಪಿಸಲಿದೆ. ಸರ್ಕಾರದಿಂದ ಹೆಚ್ಚು ಅನುದಾನದ ಭರವಸೆ ದೊರೆತಲ್ಲಿ ಪಾಲಿಕೆಗಳ ಬಜೆಟ್ ಗಾತ್ರ ನಿರೀಕ್ಷೆಗಿಂತ ಶೇ.20-25 ಹೆಚ್ಚು ಹಿಗ್ಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಲೆಕ್ಕಾಚಾರ ಮಾಡಿದ್ದಾರೆ.
ನಾಗರಿಕರಿಂದ ಸಲಹೆ ಆಹ್ವಾನ:
2026-27ನೇ ಸಾಲಿನ ಆಯವ್ಯಯ ರೂಪಿಸುವ ಕಸರತ್ತು ಆರಂಭಿಸಿರುವ ಪಾಲಿಕೆಗಳು ನಾಗರಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ಮೂಲಸೌಕರ್ಯ ಅಭಿವೃದ್ಧಿ, ಕಲ್ಯಾಣ ಕಾರ್ಯಕ್ರಮ, ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ, ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ನಾಗರಿಕರು ತಮ್ಮ ಸಲಹೆಗಳನ್ನು ಈ ತಿಂಗಳ 27ರೊಳಗೆ ಆಯಾ ಕಾರ್ಪೋರೇಷನ್‌ಗಳ ಕಚೇರಿಗೆ ತಲುಪಿಸಬಹುದಾಗಿದೆ. ಸಲಹೆಗಳಲ್ಲಿ ಉತ್ತಮವಾದವುಗಳನ್ನು ಆಯ್ಕೆ ಮಾಡಿ ಬಜೆಟ್‌ನಲ್ಲಿ ಅಡಕಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.