45,339 ಕ್ವಿಂಟಾಲ್ ಆಹಾರ ಧಾನ್ಯ ಜಪ್ತಿ  
ಬೆಂಗಳೂರು

45,339 ಕ್ವಿಂಟಾಲ್ ಆಹಾರ ಧಾನ್ಯ ಜಪ್ತಿ: 747 ಕೇಸ್ ದಾಖಲು-food grains

ಬೆಂಗಳೂರು: ರಾಜ್ಯದಲ್ಲಿ ಪಡಿತರ ಆಹಾರಧಾನ್ಯಗಳಿಗೆ ಹಲವು ಮಾರ್ಗಗಳಲ್ಲಿ ಕನ್ನ ಹಾಕಲಾಗುತ್ತಿದ್ದು, 2025ರ ಜನವರಿಯಿಂದ ಡಿಸೆಂಬರ್‌ವರೆಗೆ ರಾಜ್ಯಾದ್ಯಂತ 45,339 ಕ್ವಿಂಟಾಲ್ ಆಹಾರ ಧಾನ್ಯ ಜಪ್ತಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 747 ಕೇಸ್ ದಾಖಲಿಸಿ 707 ಆರೋಪಿಗಳನ್ನು ಬಂಧಿಸಲಾಗಿದೆ.
ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಮತ್ತು 10.80 ಲಕ್ಷ ಅಂತ್ಯೋದಯ ಕಾರ್ಡ್‌ಗಳಿಂದ ಒಟ್ಟು 4.11 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು 4.34 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥವನ್ನು ಕಾರ್ಡ್‌ದಾರರಿಗೆ ವಿತರಿಸಲಾಗುತ್ತಿದೆ. ಆದರೆ ಸಗಟು ಮಳಿಗೆಗಳ ಮ್ಯಾನೇಜರ್ ಸೇರಿ ಆಹಾರ ಇಲಾಖೆಯ ಕೆಲ ಅಧಿಕಾರಿಗಳೇ ದಂಧೆಕೋರರ ಜತೆ ಶಾಮೀಲಾಗಿ ಪಡಿತರ ಧಾನ್ಯಗಳಿಗೆ ಕನ್ನ ಹಾಕುತ್ತಿದ್ದಾರೆ.
ನ್ಯಾಯಬೆಲೆ ಅಂಗಡಿ ಮಾಲೀಕರು ರೇಷನ್ ವಿತರಣೆ ವೇಳೆ ತೂಕದಲ್ಲಿ ಮೋಸ ಮಾಡಿದರೆ, ಅಕ್ಕಿ ಗಿರಣಿ ಮಾಲೀಕರು ಕಾಳಸಂತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಖರೀದಿಸಿ ಪಾಲಿಶ್, ಸಾರ್ಟೆಕ್ಸ್ ಮಾಡಿ ಬೇರೆ ಬೇರೆ ಬ್ರಾಂಡ್‌ನ ಹೆಸರಿನಲ್ಲಿ ಪ್ಯಾಕಿಂಗ್ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಗೋದಾಮುಗಳಿಂದ ಪಡಿತರ ಸಾಗಾಣೆ ಮಾಡುವ ವೇಳೆ ಟೆಂಡರ್‌ನಲ್ಲಿ ನೋಂದಾಯಿಸದ ವಾಹನಗಳಲ್ಲಿ ಅಪಾರ ಪ್ರಮಾಣದಲ್ಲಿ ಪಡಿತರ ಸಾಗಿಸಲಾಗುತ್ತಿದೆ.
ಅಕ್ಕಿ ಕೊಟ್ಟರೆ ರಾಗಿ ಇಲ್ಲ: ದಕ್ಷಿಣ ಕರ್ನಾಟಕ ಭಾಗದಲ್ಲಿ ಬಿಪಿಎಲ್ ಹೊಂದಿರುವ ಕಾರ್ಡ್‌ದಾರರಿಗೆ ಅಕ್ಕಿ ಜತೆಗೆ ರಾಗಿ ವಿತರಿಸಿದರೆ, ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲಿ ಜೋಳದ ಜತೆಗೆ ಅಕ್ಕಿ ನೀಡಲಾಗುತ್ತಿದೆ. ಕರಾವಳಿ ವ್ಯಾಪ್ತಿಯ ಲಾನುಭವಿಗಳಿಗೆ ಕುಚಲಕ್ಕಿ ಕೊಡಲಾಗುತ್ತಿದೆ. ಆದರೆ ರಾಜ್ಯದ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್‌ದಾರರಿಗೆ ಅಕ್ಕಿ ಕೊಟ್ಟರೆ ರಾಗಿ ಕೊಡುವುದಿಲ್ಲ. ಇನ್ನೂ ಕೆಲ ಅಂಗಡಿಗಳಲ್ಲಿ ರಾಗಿ ಕೊಟ್ಟರೆ ಅಕ್ಕಿ ಕೊಡುವುದಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.