ಸರ್ಜಾಪುರ ಸಬ್‌ರಿಜಿಸ್ಟ್ರಾರ್ ಕಚೇರಿ 
ಬೆಂಗಳೂರು

ಇ-ಖಾತಾ ಪಡೆಯದೆ 40 ಸೇಲ್ ಡೀಡ್

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಿರಾಸ್ತಿ ದಸ್ತಾವೇಜು ವಹಿವಾಟು ನಡೆಸಲು ಇ-ಖಾತಾ ಕಡ್ಡಾಯ ಮಾಡಿರುವ ಕಂದಾಯ ಇಲಾಖೆಯ ಕಾನೂನು ಕೇವಲ ಅಮಾಯಕರ ಮೇಲಷ್ಟೇ ಹೇರಲಾಗುತ್ತಿದೆ. ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಇ-ಖಾತಾ ಇಲ್ಲದೆಯೇ ನಿಯಮ ಉಲ್ಲಂಘನೆ ಮಾಡಿ ಸ್ಥಿರಾಸ್ತಿಗಳ ವಹಿವಾಟುಗಳನ್ನು ರಾಜಾರೋಷವಾಗಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೊರವಲಯ ಆನೇಕಲ್ ತಾಲೂಕಿನಲ್ಲಿ ಇನ್ಫೋಸಿಸ್ (Infosys Company) ತನ್ನ ಒಡೆತನದ 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಕಂಪನಿಗೆ 250 ಕೋಟಿ ರೂ.ಗೆ ಮಾರಾಟ ಮಾಡಿದ್ದು, ಇದರ 40 ಕ್ರಯಪತ್ರಗಳು (sale deed) ಸರ್ಜಾಪುರ ಉಪನೋಂದಣಿ ಕಚೇರಿಯಲ್ಲಿ ಒಂದೇದಿನ ನೋಂದಣಿ ಆಗಿವೆ.
53.5 ಎಕರೆ ಭೂಮಿಗೂ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ವರ್ಗಾವಣೆ ರಹಿತ ಇ-ಖಾತಾವನ್ನು ಇನ್ಫೋಸಿಸ್ ಕಂಪನಿ ಪಡೆದಿತ್ತು. ವರ್ಗಾವಣೆ ರಹಿತ ಇ-ಖಾತಾ ಆಗಿರುವ ಕಾರಣಕ್ಕೆ ಇ-ಸ್ವತ್ತಿನಿಂದ ಕಾವೇರಿ 2.0 ತಂತ್ರಾಂಶಕ್ಕೆ ಇನ್ಫೋಸಿಸ್ ಆಸ್ತಿ ಸಂಯೋಜನೆ ಆಗಿರಲಿಲ್ಲ. ಇದು ಕೇವಲ ಆಸ್ತಿ ತೆರಿಗೆ ಮತ್ತಿತರ ವಹಿವಾಟು ನಡೆಸುವ ಸಲುವಾಗಿ ವರ್ಗಾವಣೆರಹಿತ ಇ-ಖಾತಾ ನೀಡಲಾಗಿತ್ತು. ಡಿ.22ರಂದು ಸರ್ಜಾಪುರ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಇನ್ಫೋಸಿಸ್ ಕಂಪನಿಯ 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಕಂಪನಿಗೆ ಕ್ರಯಪತ್ರ ಮಾಡುವಾಗ ಇ-ಖಾತಾ ಪಡೆಯದೆ ಸಬ್ ರಿಜಿಸ್ಟ್ರಾರ್ ಎಸ್. ರವಿ. ಸಂಗನಗೌಡ ಕಾನೂನು ಉಲ್ಲಂಸಿದ್ದಾರೆ.
ಕ್ರಯ ದಸ್ತಾವೇಜು ಕಾವೇರಿ 2.0 ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುವಾಗ ಸಬ್ ಆರ್ಟಿಕಲ್‌ನಲ್ಲಿ ಇ-ಖಾತಾ ಆಯ್ಕೆ ಮಾಡುವ ಬದಲಿಗೆ ಸಿವಿಲ್ ಕೋರ್ಟ್ ಆದೇಶ ಆಯ್ಕೆ ಮಾಡಿ ಇಂಟಿಗ್ರೇಷನ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಇದಾದ ಮೇಲೆ ಕೃಷಿ ಭೂಮಿ ಎಂದು ಆಯ್ಕೆ ಮಾಡಿಕೊಂಡು 40 ಕ್ರಯ ಪತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ. ದಸ್ತಾವೇಜುಗಳು ಕ್ರಮಬದ್ಧವಾಗಿವೆ ಎಂದು ಉಪನೋಂದಣಾಧಿಕಾರಿ ಎಸ್. ರವಿ. ಸಂಗನಗೌಡ ಒಪ್ಪಿಕೊಂಡು ಸೇಲ್ ಡೀಡ್‌ಗಳನ್ನು ರಿಜಿಸ್ಟ್ರೇಷನ್ ಮಾಡಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
2024ರ ಅಕ್ಟೋಬರ್‌ನಿಂದ ದಸ್ತಾವೇಜುಗಳ ನೋಂದಣಿಗೆ ಇ-ಆಸ್ತಿ, ಇ-ಸ್ವತ್ತು ಮತ್ತು ಭೂಮಿ ತಂತ್ರಾಂಶದಿಂದ ಬರುವ ಇ-ಖಾತಾ ಮತ್ತು ಪಹಣಿ ಪಡೆದು ನೋಂದಣಿ ಮಾಡಬೇಕೆಂದು ಕಡ್ಡಾಯ ಮಾಡಲಾಗಿತ್ತು. ಇದೀಗ ಇನ್ಫೋಸಿಸ್ ಕಂಪನಿಯ ಆಸ್ತಿ ಕ್ರಯ ಪತ್ರ ಮಾಡುವಾಗ ಈ ನಿಯಮ ಉಲ್ಲಂಘನೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
"

ನೋಂದಣಿ ಕಾಯ್ದೆ ಪ್ರತಿಯೊಬ್ಬರಿಗೂ ಅನ್ವಯ. ನಿಯಮ ಉಲ್ಲಂಸಿ ರಿಜಿಸ್ಟ್ರೇಷನ್ ಮಾಡಿದ್ದರೆ ಕ್ರಮಕೈಗೊಳ್ಳುತ್ತೇನೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸರ್ಜಾಪುರ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಉಲ್ಲಂಘನೆ ಆಗಿರುವುದು ಗೊತ್ತಾಗಿದೆ.

22-ಬಿ ಉಲ್ಲಂಘನೆ

ನೋಂದಣಿ ಅಧಿನಿಯಮ 1908ರ ಪ್ರಕರಣ 69ರ ಕರ್ನಾಟಕ ನೋಂದಣಿ ವಿಧೇಯಕಕ್ಕೆ ತಿದ್ದುಪಡಿ ತಂದು ಕಂದಾಯ ಇಲಾಖೆ ಡಿಸೆಂಬರ್ 22ಕ್ಕೆ ಜಾರಿಗೆ ತಂದಿದೆ. ನಿಯಮ 22ಬಿ ಪ್ರಕಾರ ರಿಜಿಸ್ಟ್ರೇಷನ್ ವೇಳೆ ಸಕ್ಷಮ ಪ್ರಾಧಿಕಾರವು ನಿರ್ವಹಿಸುವ ವಿದ್ಯುನ್ಮಾನ ದಾಖಲೆ ಮುಖಾಂತರ ನೋಂದಣಿ ಕಾವೇರಿ 2.0 ತಂತ್ರಾಂಶಕ್ಕೆ ಬರುವ ದತ್ತಾಂಶ ಪಡೆಯಬೇಕು. ಇಲ್ಲವಾದರೆ, ಸಬ್ ರಿಜಿಸ್ಟ್ರಾರ್‌ಗಳು ದಸ್ತಾವೇಜು ನೋಂದಣಿಯನ್ನು ನಿರಾಕರಿಸಬೇಕು. ಆದರೆ, ಸರ್ಜಾಪುರ ಸಬ್ ರಿಜಿಸ್ಟ್ರಾರ್ ನಿರಾಕರಿಸಿಲ್ಲ. ಬದಲಿಗೆ ಕ್ರಯ ಪತ್ರಗಳನ್ನು ನೋಂದಾವಣಿ ಮಾಡಿದ್ದು, ಇದರ ಆಧಾರದ ಮೇಲೆ ಜಿಲ್ಲಾ ನೋಂದಣಾಧಿಕಾರಿ, ತಿದ್ದುಪಡಿ ವಿಧೇಯಕದಲ್ಲಿ ನೀಡಿರುವ ಅಧಿಕಾರ ಬಳಸಿ ಸ್ವಯಂ ದೂರು ದಾಖಲಿಸಿಕೊಂಡು ಕ್ರಯ ಪತ್ರಗಳನ್ನು ರದ್ದುಮಾಡುವ ಅಧಿಕಾರ ಹೊಂದಿದ್ದಾರೆ.

ಸಚಿವರ ಪಾರದರ್ಶಕತೆಗೆ ಸಡ್ಡು

ಉಪ ನೋಂದಣಿ ಇಲಾಖೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕಂದಾಯ ಸಚಿವ ಕೃಷ್ಣಬೈರೇಗೌಡ, (krishna byre gowda) ವರ್ಗಾವಣೆಯಲ್ಲಿ ಕೌನ್ಸಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದರು. ಐದು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಮುಲಾಜಿಲ್ಲದೆ ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದರು. ಸಬ್‌ರಿಜಿಸ್ಟ್ರಾರ್‌ಗಳು ಮಾತ್ರ ನಿಯಮ ಪಾಲನೆ ಮತ್ತು ಭ್ರಷ್ಟಾಚಾರದಿಂದ ದೂರ ಉಳಿದಿಲ್ಲ ಎಂಬುದು ಸರ್ಜಾಪುರ ಉಪನೋಂದಣಾಧಿಕಾರಿ ತಪ್ಪಿನಿಂದ ಬೆಳಕಿಗೆ ಬಂದಿದೆ.