- ಪಿಎಂ-ವಿಬಿಆರ್ವೈ ಲಾನುಭವಿಗಳಿಗೆ ನೀಡಿಕೆ
- ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಸಿ.ಕೆ.ರಾಮಮೂರ್ತಿ ಚಾಲನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವತಿಯಿಂದ ಪ್ರಧಾನಮಂತ್ರಿ ವಿಕಸಿತ ಭಾರತ್ ಉದ್ಯೋಗ ಯೋಜನೆ (ಪಿಎಂ-ವಿಬಿಆರ್ವೈ) ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ರಾಷ್ಟ್ರೀಯ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಗರದ ಎಚ್ಎಸ್ಆರ್ ಲೇಔಟ್ನ ನಿಫ್ಟ್ ಆಡಿಟೋರಿಯಂನಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
ಈ ಯೋಜನೆಯ ರಾಷ್ಟ್ರೀಯಮಟ್ಟದ ಮುಖ್ಯ ಕಾರ್ಯಕ್ರಮವು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಾದ್ಯಂತ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಟ್ಟು 2,400 ಕೋಟಿ ರೂ. ಮೊತ್ತದ ಪ್ರೋತ್ಸಾಹಧನವನ್ನು ವಿತರಿಸಿದರು. ದೇಶವ್ಯಾಪಿ ವ್ಯಾಪಕ ಜನಸಂಪರ್ಕ ಕಾರ್ಯಕ್ರಮದ ಭಾಗವಾಗಿ ದೇಶದ 200 ಸ್ಥಳಗಳಲ್ಲಿ ಏಕಕಾಲದಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಕೆ. ರಾಮಮೂರ್ತಿ, ಉದ್ಯೋಗ ಸೃಷ್ಟಿ ಹಾಗೂ ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ. ಉದ್ಯೋಗಿಗಳಿಗೆ ಸಂಬಳದ ಜತೆಗೆ ಪ್ರೋತ್ಸಾಹ ಧನ ಸಿಗುವುದರಿಂದ ತುಂಬಾ ಅನುಕೂಲ ಇದೆ. ಸುಮಾರು 1.92 ಕೋಟಿ ಉದ್ಯೋಗಿಗಳು ಇದರ ಲಾನುಭಾವಿಗಳಾಗಿರುವುದು ಸಂತಸದ ವಿಚಾರ. ಉದ್ಯೋಗಿಗಳು ದೇಶದ ಬೆನ್ನೆಲುಬು. ಕೇಂದ್ರ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಯುವ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು, ಉದ್ಯೋಗದಾತರು, ಸಾರ್ವಜನಿಕ ಪ್ರತಿನಿಧಿಗಳು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಸಂಸ್ಥೆಗಳ ವತಿಯಿಂದ ಹೊಸದಾಗಿ ಉದ್ಯೋಗ ಪಡೆದ ಸದಸ್ಯರಿಗೆ ಉದ್ಯೋಗ ಪತ್ರಗಳನ್ನು ವಿತರಿಸಲಾಯಿತು. ನಗರದ 11 ಭಾಗದಲ್ಲಿ ಕಾರ್ಯಕ್ರಮಗಳು ನಡೆದಿದೆ.
ಸಹ ನಿರ್ದೇಶಕಿ ಡಾ.ವಿ. ಯಶೋಧಾ ಕುಮಾರಿ, ಇಎಸ್ಐಸಿ ಉಪ ನಿರ್ದೇಶಕಿ ಎ.ಎಸ್. ಕನಿತಾ ಸೆಲ್ವಿ, ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತರಾದ ವನ್ಲಾಲ್ ಮೋನ್, ಜಿ.ದಿನೇಶ್ ಇದ್ದರು.