Crime 
ಬೆಂಗಳೂರು

ಪ್ಲಾಟ್ ಕೊಡಿಸುವ ನೆಪದಲ್ಲಿ ₹2.15 ಕೋಟಿ ವಂಚನೆ

ಪರಿಚಯವಿದ್ದ ಬ್ರೋಕರ್‌ನಿಂದಲೇ ವೃದ್ಧೆಗೆ ಮೋಸ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್ ಕೊಡಿಸುವ ನೆಪದಲ್ಲಿ ವೃದ್ಧೆಯೊಬ್ಬರಿಗೆ ಬರೊಬ್ಬರಿ 2.15 ಕೋಟಿ ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೇಗೂರು ನಿವಾಸಿಯಾದ 67 ವರ್ಷದ ವೃದ್ಧೆಯೊಬ್ಬರು ನೀಡಿದ ದೂರಿನ ಮೇರೆಗೆ ಬ್ರೋಕರ್ ರಾಧಾಕೃಷ್ಣ ಎಂಬಾತನ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅ.27ರಂದು ಪ್ರಕರಣ ದಾಖಲಾಗಿದೆ.

ಪರಿಚಯವಿದ್ದ ಬ್ರೋಕರ್‌ನಿಂದಲೇ ವೃದ್ಧೆ ಮೋಸಕ್ಕೆ ಬಲಿಯಾಗಿದ್ದಾರೆ. ಆರೋಪಿ ರಾಧಾಕೃಷ್ಣನು ವೃದ್ಧೆ ವಾಸವಾಗಿದ್ದ ಮನೆಯ ಬಳಿ ಆಗಾಗ ಬಂದು ಹೋಗುತ್ತಿದ್ದ. ಈ ವೇಳೆ ಇಬ್ಬರ ನಡುವೆ ವಿಶ್ವಾಸ ಬೆಳದಿದೆ. ಇದನ್ನೆ ಬಂಡವಾಳ ಮಾಡಿಕೊಂಡ ಆರೋಪಿ ಕೋಟ್ಯಂತರ ರೂ. ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್.ಡಿ ಎಲೈಟ್ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್ ಕೊಡಿಸುವಂತೆ ವೃದ್ಧೆ ಬ್ರೋಕರ್‌ಗೆ ತಿಳಿಸಿದ್ದರು. ಆಗ ಬ್ರೋಕರ್ ತನ್ನದೆ ಪ್ಲಾಟ್ ಮಾರುತ್ತಿದ್ದೇನೆ ಅದನ್ನೇ ಕೊಡಿಸುತ್ತೇನೆಂದು ಭರವಸೆ ನೀಡಿದ್ದ. ಅದರಂತೆ ಮೂರು ಪ್ಲಾಟ್‌ಗಳನ್ನು ತೋರಿಸಿದ್ದ. ಅದರಲ್ಲಿ 2 ಪ್ಲಾಟ್‌ಗಳನ್ನು ಆಯ್ಕೆ ಮಾಡಿ ವೃದ್ಧೆಯು ಖರೀದಿಸುವುದಾಗಿ ತಿಳಿಸಿದ್ದರು.

ಪ್ಲಾಟ್ ಖರೀದಿಸುವ ವ್ಯವಹಾರ ಸಂಬಂಧ ವೃದ್ಧೆಯು 3 ಬಾರಿ ಬ್ರೋಕರ್‌ನೊಂದಿಗೆ ಮಾತುಕತೆ ನಡೆಸಿ ಒಂದು ಸೈಟಿಗೆ 1.87 ಕೋಟಿ ರೂ. ಮತ್ತೊಂದು ಸೈಟಿಗೆ 1.40 ಕೋಟಿ ರೂ.ಗಳಂತೆ ದರ ನಿಗದಿ ಮಾಡಿಕೊಂಡಿದ್ದರು. 2 ದಿನಗಳ ಬಳಿಕ 2025ರ ನವೆಂಬರ್ 10ರಂದು ಬ್ರೋಕರ್ ಅಕೌಂಟ್‌ಗೆ ಮುಂಗಡ ಹಣವಾಗಿ 30 ಲಕ್ಷ ರೂ. ಪಾವತಿಸಿದ್ದರು.

ಹಣ ಸ್ವೀಕರಿಸಿದ ಬಳಿಕ ವ್ಯಾಜ್ಯ ಆಸ್ತಿ ಎಂದಿದ್ದ:

ಹಣ ಸ್ವೀಕರಿಸಿದ್ದ ಆರೋಪಿ ರಿಜಿಸ್ಟರ್ ಮಾಡಿಸುವ ನಾಟಕವಾಡುತ್ತಾ ಬಾಕಿ ಹಣ ವಸೂಲಿ ಮಾಡಿದ್ದ. ವಿವಿಧ ದಿನಾಂಕಗಳಂದು 1.37 ಕೋಟಿ ರೂ. ಸ್ವೀಕರಿಸಿದ್ದ. ಬಳಿಕ ನಗದು ಹಣವಾಗಿ 53 ಲಕ್ಷ ರೂ.ಗಳಂತೆ 2 ಬಾರಿ ಹಣ ಸ್ವೀಕರಿಸಿದ್ದ. ನಂತರ ಕೆಲ ತಿಂಗಳಾದಾಗ ಒಂದು ಸೈಟ್ ವ್ಯಾಜ್ಯದ ನೆಪ ಹೇಳಿ ಕ್ಯಾನ್ಸಲ್ ಮಾಡಿಕೊಂಡ. ಅದರ ಹಣವನ್ನು ವಾಪಸ್ ನೀಡದೆ ಮತ್ತೊಂದು ಸೈಟ್ ಅನ್ನು ರಿಜಿಸ್ಟರ್ ಮಾಡಿಕೊಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಆರೋಪಿಗೆ ನೋಟಿಸ್ ಜಾರಿ ಮಾಡಿದ್ದು, ತನಿಖೆ ಮುಂದುವರಿದಿದೆ.