ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕಾ ಪಾಟೀಲ್ ABSSP
ಬೆಂಗಳೂರು

2026ನೇ ಸಾಲಿನ ರಮಣಶ್ರೀ ಶರಣ ಪ್ರಶಸ್ತಿ ಪ್ರಕಟ

* 17ರಂದು ಪ್ರದಾನ

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ವತಿಯಿಂದ ನೀಡಲಾಗುವ 2026ನೇ ಸಾಲಿನ ರಮಣಶ್ರೀ ಶರಣ ಪ್ರಶಸ್ತಿ ಪ್ರಕಟಗೊಂಡಿದ್ದು, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕಾ ಪಾಟೀಲ್ ಅವರು ರಮಣಶ್ರೀ ಶರಣ ಜೀವಮಾನ ಸಾಧಕಿ ಗೌರವಕ್ಕೆ ಭಾಜನರಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ರೂ. ನಗದು ಒಳಗೊಂಡಿದೆ. ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಗೆ ಶರಣ ಸಾಹಿತ್ಯ ಸಂಶೋಧನೆಗಾಗಿ ಹೊಸಪೇಟೆಯ ಕೆ. ರವೀಂದ್ರನಾಥ, ವಚನ ಸಾಹಿತ್ಯ ರಚನೆಗಾಗಿ ಗದಗದ ರಾಜೇಂದ್ರ ಎಸ್. ಗಡಾದ, ವಚನ ಸಂಗೀತಕ್ಕಾಗಿ ಧಾರವಾಡದ ಕೈವಲ್ಯ ಕುಮಾರ್ ಗುರವ ಹಾಗೂ ಶರಣ ಸಂಸ್ಕೃತಿ ಪ್ರಸಾರಕ್ಕಾಗಿ ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ್ ಗುರಪ್ಪ ಕೊನೇಕ ಅವರು ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯು ತಲಾ 40 ಸಾವಿರ ರೂ. ನಗದು ಹೊಂದಿದೆ. ‘ರಮಣಶ್ರೀ ಶರಣ ಉತ್ತೇಜನ ಶ್ರೇಣಿ ಪ್ರಶಸ್ತಿ’ಗೆ ಶರಣ ಸಾಹಿತ್ಯ ಸಂಶೋಧನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ವಸುಂಧರಾ, ಆಧುನಿಕ ವಚನ ರಚನೆಗೆ ಮೈಸೂರಿನ ನಗರ್ಲೆ ಶಿವಕುಮಾರ್, ವಚನ ಸಂಗೀತಕ್ಕೆ ಬೆಂಗಳೂರಿನ ರಾಜೇಶ್ವರಿ ಸಾದರ, ಕವಿತಾ ಸಾದರ, ಧಾರವಾಡದ ವಿಜಯಲಕ್ಷ್ಮಿ ಪೂಜೇರ ಹಾಗೂ ಮೈಸೂರಿನ ವಿಶ್ವ ವಚನ ಫೌಂಡೇಷನ್‌ನ ವಚನ ಕುಮಾರಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 20 ಸಾವಿರ ನಗದು ಒಳಗೊಂಡಿದೆ. 17ರಂದು ನಗರದ ರಮಣಶ್ರೀ ಹೋಟೆಲ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಸದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ. ಸೋಮಣ್ಣ ಭಾಗವಹಿಸಲಿದ್ದಾರೆ ಎಂದು ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್. ಷಡಕ್ಷರಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್ ತಿಳಿಸಿದ್ದಾರೆ.