- ವಿಯಾಡಕ್ಟ್, ಡಿಪೋ ಸಂಪರ್ಕ ಪೂರ್ಣವಾದ ಬಳಿಕವೇ ಟ್ರಯಲ್ ರನ್ ಆರಂಭ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ಮೇ ಒಳಗಾಗಿ ಮೊದಲ ಎರಡು ರೈಲುಗಳು ಆಗಮಿಸಲಿದೆ. ಸಿಲ್ಕ್ ಬೋರ್ಡ್ ಜಂಕ್ಷನ್&ಕೆ. ಆರ್. ಪುರಂ ಮಾರ್ಗದಲ್ಲಿ ರೈಲುಗಳ ಟ್ರಯಲ್ ರನ್ ಮಾತ್ರ ವಿಯಾಡಕ್ಟ್ ಹಾಗೂ ಡಿಪೋ ಸಂಪರ್ಕ ಕಾಮಗಾರಿ ಪೂರ್ಣಗೊಂಡ ಬಳಿಕವೇ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಮಾರ್ಗ ಆರಂಭದಲ್ಲಿ ಎದುರಾಗುತ್ತಿರುವ ಪುನರಾವರ್ತಿತ ಅಡೆತಡೆಗಳು ಇಲ್ಲಿಯೂ ಗೋಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ವಾಣಿಜ್ಯ ಸಂಚಾರಕ್ಕೆ ರೈಲುಗಳ ಕೊರತೆ ಇತ್ತು. ಗುಲಾಬಿ ಮಾರ್ಗಕ್ಕೆ ರೈಲುಗಳಿದ್ದರೂ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ ಪದೇಪದೆ ನಮ್ಮ ಮೆಟ್ರೋ ನೂತನ ಪ್ರಾಜೆಕ್ಟ್ಗಳು ಸಂಕಷ್ಟದ ಸುಳಿಗೆ ಬೀಳುತ್ತಲೇ ಇದೆ.
ಬಿಇಎಂಎಲ್ ಸಂಸ್ಥೆ ಒಪ್ಪಂದದಡಿಯಲ್ಲಿ ಒಟ್ಟು 53 ರೈಲುಗಳನ್ನು ನೀಡಬೇಕಿದ್ದು, ನೀಲಿ ಮಾರ್ಗಕ್ಕೆ
ಮೇನಲ್ಲಿ 7, 8 ಟ್ರೈನ್ಸೆಟ್ಗಳನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ.
ಈ 53 ರೈಲುಗಳಲ್ಲಿ 16 ರೈಲುಗಳು ಗುಲಾಬಿ ಮಾರ್ಗಕ್ಕೆ, ಮತ್ತೊಂದು 16 ರೈಲುಗಳು ಹಂತ-2ಎ (ಸಿಲ್ಕ್ ಬೋರ್ಡ್ ಜಂಕ್ಷನ್&ಕೆ. ಆರ್. ಪುರಂ, 19.75 ಕಿ.ಮೀ)ಗೆ ಹಾಗೂ 21 ರೈಲುಗಳು ಹಂತ-2ಬಿ (ಕೆಆರ್ ಪುರಂ&ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, 38.44 ಕಿ.ಮೀ)ಗೆ ಮೀಸಲಾಗಿವೆ. ಹಂತ-2ಎ ಮತ್ತು 2ಬಿ ಒಟ್ಟಾಗಿ 58.19 ಕಿ.ಮೀ ಉದ್ದದ ನೀಲಿ ಮಾರ್ಗ 2027ಕ್ಕೆ ಕಾರ್ಯರೂಪಕ್ಕೆ ಬರುವ ನಿರೀೆ ಇದೆ.
ಡಿಪೋ ವಿಸ್ತರಣೆ ವಿಳಂಬ: ಬೈಯಪ್ಪನಹಳ್ಳಿ ಡಿಪೋವನ್ನು 28 ಸ್ಟೇಬ್ಲಿಂಗ್ ಲೈನ್ಗಳೊಂದಿಗೆ ವಿಸ್ತರಿಸಲಾಗುತ್ತಿದೆ. ಕಸ್ತೂರಿನಗರ ಹಾಗೂ ಕೆ. ಆರ್. ಪುರಂ ಬಳಿ ಎರಡು ಎತ್ತರಿಸಿದ ಟ್ರ್ಯಾಕ್ಗಳ ಮೂಲಕ ಡಿಪೋ ಸಂಪರ್ಕ ಕಲ್ಪಿಸಲಾಗುತ್ತದೆ. ಭೂಸ್ವಾಧಿನ ಸಮಸ್ಯೆಗಳ ಕಾರಣದಿಂದ ಈ ಕಾಮಗಾರಿ ವಿಳಂಬವಾಗಿದೆ.
ಬಿಎಂಆರ್ಸಿಎಲ್ ಹಂತ-2ಎ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ಗೆ ಹಾಗೂ ಹಂತ-2ಬಿ ಕಾಮಗಾರಿಯನ್ನು ಮುಂದಿನ ವರ್ಷದ ಡಿಸೆಂಬರ್ಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.
ಈಗಾಗಲೇ ಪಿಂಕ್ ಲೈನ್ಗೆ ಐದು ರೈಲುಗಳನ್ನು ಬಿಇಎಂಎಲ್ ಒದಗಿಸಿದ್ದು, ಆರನೇ ರೈಲು ಶೀಘ್ರದಲ್ಲೇ ಬರಲಿದೆ. ಎಲ್ಲ ರೈಲುಗಳಲ್ಲೂ ಒಂದೇ ರೀತಿಯ ಸಿಗ್ನಲಿಂಗ್ ತಂತ್ರಜ್ಞಾನ ಮತ್ತು ವೈಶಿಷ್ಟ$್ಯಗಳಿದ್ದು, ಬ್ಲೂ ಲೈನ್ಗೆ ಬ್ರಾ$್ಯಂಡಿಂಗ್ ಸ್ಟಿಕರ್ ಹಾಗೂ ವಿಮಾನ ನಿಲ್ದಾಣ ಪ್ರಯಾಣಿಕರಿಗಾಗಿ ಲಗೇಜ್ ರ್ಯಾಕ್ ವಿಭಿನ್ನವಾಗಿರಲಿದೆ.
ಪಿಂಕ್ ಲೈನ್ಗೆ ಅನುಮೋದನೆ ಬಾಕಿ
ಪಿಂಕ್ ಲೈನ್ ರೈಲುಗಳಿಗೆ ಸಂಬಂಧಿಸಿದ ಪ್ರಮುಖ ಆರ್ಡಿಎಸ್ಒ (ರಿಸರ್ಚ್ ಡಿಸೈನ್ ಆ್ಯಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್) ಪರೀಕ್ಷೆಗಳು ಇನ್ನೂ ಆರಂಭವಾಗಿಲ್ಲ. ರೈಲ್ವೆ ಮಂಡಳಿ ಎತ್ತಿರುವ ವಿನ್ಯಾಸ ಸಂಬಂಧಿತ ಪ್ರಶ್ನೆಗಳಿಗೆ ಬಿಎಂಆರ್ಸಿಎಲ್ ಉತ್ತರ ನೀಡುವ ಪ್ರಕ್ರಿಯೆಯಲ್ಲಿ ತೊಡಗಿದೆ.
ಆರ್ಡಿಎಸ್ಒ ಪ್ರಮಾಣೀಕರಣ ಹಾಗೂ ಸುರಕ್ಷತಾ ಅನುಮೋದನೆಗೆ ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಇದರಿಂದ ಮೇ ತಿಂಗಳೊಳಗೆ 7.5 ಕಿ.ಮೀ ಉದ್ದದ ಕಳೇನಅಗ್ರಹಾರ&ತಾವರೇಕೆರೆ ವಿಭಾಗವನ್ನು ಆರಂಭಿಸುವ ಯೋಜನೆಗೆ ಧಕ್ಕೆಯಾಗುವ ಸಾಧ್ಯತೆ ಇದೆ.