ಬೆಂಗಳೂರಿನ HSR ಲೇಔಟ್‌ನಲ್ಲಿ ಆಟೋ ಚಾಲಕ, ಯುವತಿಯರ ಮಧ್ಯೆ ಹೊಡೆದಾಟ
ರಸ್ತೆ ಮಧ್ಯೆ ಬಟ್ಟೆ, ಕೂದಲು ಎಳೆದಾಡಿ ಥಳಿಸಿದ ಚಾಲಕ, ಯುವತಿಯರಿಂದಲೂ ಹಲ್ಲೆ
ದೂರು ದಾಖಲಿಸಲು ಸಮಯ ಕೇಳಿದ ಥಳಿತಕ್ಕೊಳಗಾದ ಯುವತಿಯರು
ಬೆಂಗಳೂರು: ನಡು ರಸ್ತೆಯಲ್ಲಿ ಆಟೋ ಡ್ರೈವರ್ ಮತ್ತು ಉತ್ತರ ಭಾರತದ ಇಬ್ಬರು ಯುವತಿಯರು ಎಳೆದಾಡಿ, ಹಿಗ್ಗಾಮುಗ್ಗ ಹೊಡೆದಾಡಿಕೊಂಡ ವಿಡಿಯೋ ಎಕ್ಸ್ನಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನಲ್ಲಿ ನಡೆದಿದೆ ಎನ್ನಲಾಗಿದೆ.
ಎಕ್ಸ್ನಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಸೆ.28ರಂದು HSR ಲೇಔಟ್ 3ನೇ ಸೆಕ್ಟರ್‌ನಲ್ಲಿ ಪ್ರಯಾಣದ ದರ ಪಾವತಿ ವಿಚಾರವಾಗಿ ಆಟೋ ಚಾಲಕ ಮತ್ತು ಉತ್ತರ ಭಾರತದ ಯುವತಿಯರೊಂದಿಗೆ ಜಗಳ ಶುರುವಾಗಿದೆ. ಮಾತುಕತೆ ತಾರಕ್ಕೇರಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಸ್ಥಳದಲ್ಲೇ ಇದ್ದ ಜನರು ಮೂವರು ಹೊಡೆದಾಡಿಕೊಂಡ ವಿಡಿಯೋ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಘರ್ ಕೇ ಕಾಲೇಶ್ ಎಂಬುವವರು ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಬೆಂಗಳೂರಿನ HSR ಲೇಔಟ್‌ನಲ್ಲಿ ಆಟೋ ಚಾಲಕ ಮತ್ತು ಯುವತಿಯರ ಮಧ್ಯೆ ಪ್ರಯಾಣದ ದರದ ವಿಚಾರಕ್ಕೆ ಗಲಾಟೆ ನಡದಿದೆ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು, ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಿದ್ದಾರೆ.
ಸಾರ್ವಜನಿಕರು ರೆಕಾರ್ಡ್ ಮಾಡಿ, ವೈರಲ್ ಆದ ವಿಡಿಯೋ ಪ್ರಕಾರ, ಹಲವಾರು ದ್ವಿಚಕ್ರ ವಾಹನಗಳು ಇರುವ ನಡು ರಸ್ತೆಯಲ್ಲಿ ಆಟೋ ನಿಂತಿದೆ. ಚಾಲಕ ಇಬ್ಬರು ಯುವತಿಯರ ಮಧ್ಯೆ ನಿಂತಿದ್ದಾರೆ. ಇಬ್ಬರು ಯುವತಿಯರು ಆತನಿಗೆ ಥಳಿಸುತ್ತಿರುವುದು. ಒಬ್ಬ ಯುವತಿ ಚಾಲಕನಿಗೆ ಹೊಡೆಯಲು ಹೈಟ್ ಸಾಲದೆ ಎಗರಿ ಹೊಡೆಯುತ್ತಿರುವುದು ವಿಡಿಯೋದಲ್ಲಿದೆ. ಆತನು ಸಹ ಒಬ್ಬ ಯುವತಿಯನ್ನು ಎಳೆದಾಡಿ, ಬಟ್ಟೆ ಎಳೆದು ಹಲ್ಲೆ ಮಾಡಿದ್ದಾನೆ. ಸ್ಥಳದಲ್ಲೇ ಇದ್ದ ಬಿಳಿ ಬಣ್ಣದ ಶ್ರಗ್ ತೊಟ್ಟಿದ್ದ ಮತ್ತೊಬ್ಬ ಯುವತಿ ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾಳೆ.
ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಎಚ್ಎಸ್ಆರ್ ಲೇಔಟ್ನ ಪೊಲೀಸರು ಯುವತಿಯರನ್ನು ಸಂಪರ್ಕಿಸಿ ದೂರು ದಾಖಲಿಸುವಂತೆ ಸಲಹೆ ನೀಡಲಾಗಿತ್ತು. ಆದರೆ, ಯುವತಿಯರು ಎರಡು ದಿನ ಕಾಲಾವಕಾಶ ಕೋರಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಇನ್ನೂ ಆಟೋ ಚಾಲಕನ ವಿಳಾಸ ಪತ್ತೆ ಹಚ್ಚಿ, ಅವನನ್ನು ಸಂಪರ್ಕಿಸಿದ ಪೊಲೀಸರಿಗೆ ಆತ ಹೇಳಿದ್ದಿಷ್ಟು, 'ಯುವತಿಯರು ನನ್ನ ಆಟೋದಲ್ಲಿ ಪ್ರಯಾಣಿಸಿದರು. ನಂತರ, ಹಣ ನೀಡಲು ಹಿಂದೇಟು ಹಾಕಿದರು. ಹೀಗಾಗಿ ಜಗಳ ಶುರುವಾಗಿತ್ತು. ಘಟನೆ ನಡೆದ ದಿನ ಅವರು ಕುಡಿದ್ದಿದ್ದ ಕಾರಣ ನನ್ನ ಮೇಲೆ ಮೊದಲು ಹಲ್ಲೆ ಮಾಡಿದರು. ಹೀಗಾಗಿ ನಾನು ಹೊಡೆದೆ. ಅವರು ನನ್ನ ಮೇಲೆ ದೂರು ದಾಖಲಿಸಿದರೆ, ನಾನೂ ಸಹ ಅವರ ವಿರುದ್ಧ ದೂರು ಕೊಡುತ್ತೇನೆ' ಎಂದಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).