ಕೃಷ್ಣ ಬೈರೇಗೌಡ 
ಬೆಂಗಳೂರು

ಎಸಿ ಕೋರ್ಟ್ 19,000 ಪ್ರಕರಣ ಬಾಕಿ

ಬೆಂಗಳೂರು: ಬೆಂಗಳೂರು ನಗರ, ಬೆಂ.ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆ ಉಪ ವಿಭಾಗಾಧಿಕಾರಿಗಳ (ಎಸಿ) (AC court) ನ್ಯಾಯಾಲಯಗಳಲ್ಲೇ ಅತಿಹೆಚ್ಚು ಪ್ರಕರಣಗಳು ಬಾಕಿ ಇರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishnabyregowda) ತಿಳಿಸಿದರು.
ವಿಕಾಸಸೌಧದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಂಗಳೂರು ನಗರ ಸುತ್ತಮುತ್ತಲ ಜಿಲ್ಲೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ 19 ಸಾವಿರ ಪ್ರಕರಣಗಳು ಬಾಕಿ ಇವೆ. ಈ ಪೈಕಿ 13 ಸಾವಿರ ಪ್ರಕರಣಗಳು ಈ ಜಿಲ್ಲೆಗಳಲ್ಲೇ ಬಾಕಿ ಇರುವುದು ಬೇಸರದ ಸಂಗತಿ ಎಂದರು.
ಅಕ್ಟೋಬರ್‌ನಲ್ಲಿ 15,364 ಪ್ರಕರಣ ಬಾಕಿ ಉಳಿದಿದ್ದವು. ಈಗ 13,610ಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆ. ಆದರೂ, ಮಿಸ್ಸಿಂಗ್ ರೆಕಾರ್ಡ್, ಆರ್‌ಸಿಸಿಎಂಎನಲ್ಲಿ ವಿಲೇವಾರಿ ಆಗದ ಹಾಗೂ ಅನರ್ಹ ಪ್ರಕರಣಗಳು ಹಾಗೂ ಆದೇಶಕ್ಕಾಗಿ ಕಾಯ್ದಿರಿಸಿದ ಪ್ರಕರಣಗಳನ್ನು ಜನವರಿ ಅಂತ್ಯದೊಳಗೆ ಮುಗಿಸಬೇಕು ಎಂದು ಸಲಹೆ ನೀಡಿದರು.
ಅಧಿಕಾರಿಗಳಿಗೆ ತಮ್ಮ ಮುಂದಿರುವ ಸವಾಲು ಹಾಗೂ ಪರಿಹಾರಗಳ ಬಗ್ಗೆ ಅರಿವಿದೆ.
ಹೀಗಾಗಿ ಸುಲಭವಾಗಿ ಇತ್ಯರ್ಥಗೊಳಿಸಬಹುದಾದ ಪ್ರಕರಣಗಳನ್ನು ಮೊದಲು ಕೈಗೆತ್ತಿಕೊಳ್ಳಿ. ಮಾರ್ಚ್ ಅಂತ್ಯದೊಳಗೆ 6 ತಿಂಗಳು ಮೀರಿದ ಎಲ್ಲ ಕೇಸ್‌ಗಳನ್ನು ಕಡ್ಡಾಯವಾಗಿ ಮುಗಿಸಿ. ಫೆಬ್ರವರಿ ಮೊದಲ ವಾರದಲ್ಲಿ ಈ 4 ಜಿಲ್ಲೆಗಳ ಮತ್ತೊಂದು ಸಭೆ ನಡೆಸಿ, ಅದರ ಆಧಾರದಲ್ಲಿ ರಾಜ್ಯಾದ್ಯಂತ ಎಲ್ಲ ಎಸಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಬೆಂ.ನಗರ ಡಿಸಿ ಜಗದೀಶ್ ಸೇರಿ ಹಿರಿಯ ಅಧಿಕಾರಿಗಳು ಇದ್ದರು.