- ಸಂಚಾರ ಸಿಕ್ಕು ನಿಯಂತ್ರಣಕ್ಕೆ ಕ್ರಮ
- ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯಲ್ಲಿ ಮೆಟ್ರೋ ವಿಸ್ತರಣೆ ಮಾಡಿ ಸಂಚಾರ ಸಿಕ್ಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. 2027ರ ಡಿಸೆಂಬರ್ ಅಂತ್ಯಕ್ಕೆ ನಗರದಲ್ಲಿ 175 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಕಾರ್ಯಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಕಚೇರಿಯಲ್ಲಿ ಸೋಮವಾರ ಮೆಟ್ರೋ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಂದಿನ ವರ್ಷ (2026ರಲ್ಲಿ) 41 ಕಿ.ಮೀ. ಉದ್ದದ ಮಾರ್ಗ ಕಾರ್ಯಾರಂಭ ಮಾಡಲಾಗುವುದು. 2027ರ ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಮಾರ್ಗ ಸೇರಿ 38 ಕಿ.ಮೀ. ಉದ್ದದ ಮಾರ್ಗ ಕಾರ್ಯಾರಂಭ ಮಾಡಲಾಗುವುದು. ಆ ಮೂಲಕ ಬೆಂಗಳೂರಿನಲ್ಲಿ ಒಟ್ಟು 175 ಕಿ.ಮೀ ಉದ್ದದ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಇರಲಿದೆ. ಇದರ ಹೊರತಾಗಿ ಮಾಗಡಿ ರಸ್ತೆಯಲ್ಲಿ ತಾವರಕೆರೆವರೆಗೆ, ಹೊಸಕೋಟೆ, ಬಿಡದಿ, ನೆಲಮಂಗಲದವರೆಗೆ ವಿಸ್ತರಿಸುವ ಯೋಜನೆಯೂ ಪ್ರಗತಿಯಲ್ಲಿದೆ. ಒಂದು ಕಡೆ ಯೋಜನೆ ಕೈಗೆತ್ತಿಕೊಂಡಿದ್ದು, ಉಳಿದ ಕಡೆಗಳಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದರು.
ನಗರದಾದ್ಯಂತ ಒಟ್ಟು 96 ಕಿ.ಮೀ. ಮೆಟ್ರೋ ಕಾರ್ಯಾಚರಣೆ ಮಾರ್ಗವಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಒಟ್ಟು 24 ಕಿ.ಮೀ. ಉದ್ದದ ಮೆಟ್ರೋ ಸಂಚಾರ ಆರಂಭ ಮಾಡಲಾಗಿದೆ. 1 ಲಕ್ಷ ಜನ ಈ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದು, ಇಲ್ಲಿ ಶೇ.30 ವಾಹನದಟ್ಟಣೆ ಕಡಿಮೆಯಾಗಿದೆ ಎಂಬ ಮಾಹಿತಿ ಇದೆ ಎಂದು ಡಿಸಿಎಂ ತಿಳಿಸಿದರು.
ಮೂರನೇ ಹಂತದ ಯೋಜನೆಯಲ್ಲಿ ಸಂಪೂರ್ಣವಾಗಿ ಎಲ್ಲ ಮಾರ್ಗದಲ್ಲೂ ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಿಸಲಾಗುವುದು. ತಾವರೆಕೆರೆ ಬಳಿ ಮೆಟ್ರೋ ನಿಲ್ದಾಣಕ್ಕೆ ಜಾಗ ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಹಾಸನದಿಂದ ಬರುವ ಜನರು ಈ ಮಾರ್ಗವಾಗಿ ಬರುವುದರಿಂದ ಇಲ್ಲೂ ಡಬಲ್ ಡೆಕ್ಕರ್ ಮಾಡಲು ತೀಮಾರ್ನಿಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಬಿಎಂಆರ್ಸಿಎಲ್ ಎಂ.ಡಿ. ಡಾ.ಜೆ. ರವಿಶಂಕರ್ ಇದ್ದರು.
3ನೇ ಹಂತಕ್ಕೆ ಜನವರಿಯಲ್ಲಿ ಟೆಂಡರ್
ಜನವರಿಯಲ್ಲಿ ಮೆಟ್ರೋ 3ನೇ ಹಂತದ ಯೋಜನೆಯಲ್ಲಿ ಎತ್ತರಿಸಿದ ಕಾರಿಡಾರ್ (ಡಬಲ್ ಡೆಕ್ಕರ್) ಸೇರಿ ಸುಮಾರು 100 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಜನರ ಪ್ರಯಾಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಆದಷ್ಟು ಸಂಚಾರ ಸಿಕ್ಕು ನಿಯಂತ್ರಿಸಿ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗಿದೆ. ಮೆಟ್ರೋ ನಿಲ್ದಾಣಗಳ ಬಳಿ ಹೆಚ್ಚಿನ ಜಮೀನು ಸ್ವಾಧಿನಪಡಿಸಿಕೊಂಡು ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ. ವಾಹನ ನಿಲುಗಡೆಗೂ ಅವಕಾಶ ಕಲ್ಪಿಸಬೇಕಿದೆ. ಮೂರನೇ ಹಂತದ ಯೋಜನೆ ಟೆಂಡರ್ ಕರೆಯಲಾಗುತ್ತಿದೆ. 25,311 ಸಾವಿರ ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ, ಜೈಕಾದಿಂದ 15,600 ಕೋಟಿ ರೂ. ಸಾಲ ಮಾಡಲಾಗುತ್ತಿದೆ. ಉಳಿದಂತೆ ಎತ್ತರಿಸಿದ ಕಾರಿಡಾರ್ಗೆ 9,700 ಕೋಟಿ ರೂ. ಮೊತ್ತದ ಟೆಂಡರ್ ಅನ್ನು ಜನವರಿಯಲ್ಲಿ ಕರೆಯಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಟನಲ್ ರಸ್ತೆ ಟೆಂಡರ್ ಮಾಹಿತಿ ಇಲ್ಲ
ಟನಲ್ ರಸ್ತೆ ಟೆಂಡರ್ ಅಂತಿಮಗೊಂಡಿದ್ದು, ಅದಾನಿ ಕಂಪನಿ ಕಡಿಮೆ ಬಿಡ್ ಮಾಡಿದೆ ಎಂಬ ವರದಿಗಳು ಬಂದಿವೆ ಎಂಬ ಪ್ರಶ್ನೆಗೆ, ಟನಲ್ ರಸ್ತೆ ಟೆಂಡರ್ ಕುರಿತು ಇನ್ನೂ ಸಂಪೂರ್ಣ ಮಾಹಿತಿ ಬಂದಿಲ್ಲ. ನನಗೆ ಅಧಿಕೃತವಾಗಿ ಪತ್ರ ಬರುವವರೆಗೂ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನಾವು ಯಾರಿಗೂ ಹಣ ನೀಡುವುದಿಲ್ಲ. ಅವರೇ ಬಂಡವಾಳ ಹಾಕಿ ಮಾಡಬೇಕು. ವಿಜೆಎಫ್ ಎಷ್ಟು ಪ್ರತಿಶತ ನೀಡುತ್ತೇವೆ ಎಂದು ಹೇಳಿದ್ದೇವೋ ಅಷ್ಟನ್ನೇ ನೀಡುತ್ತೇವೆ. ನಾವು ಅಂದಾಜು ಮಾಡಿರುವುದರಲ್ಲಿ ಶೇ.40 ಮಾತ್ರ ನೀಡುತ್ತೇವೆ. ಅದರ ಮೇಲೆ ನೀಡುವುದಿಲ್ಲ. ಮೆಟ್ರೋಗೆ ತಗುಲುವ ವೆಚ್ಚ ಪರಿಶೀಲಿಸಿದೆ. ಮುಂಬೈನಲ್ಲಿ ಆಗುತ್ತಿರುವ ವೆಚ್ಚದ ಮಾಹಿತಿ ತರಿಸಿಕೊಂಡೆ. ಅಲ್ಲಿ ಪ್ರತಿ ಕಿ.ಮೀ.ಗೆ 1,200 ಕೋಟಿ ರೂ. ಆಗುತ್ತಿದೆ ಎಂದು ಡಿಸಿಎಂ ತಿಳಿಸಿದರು.