- ತೆರವು ಸ್ಥಳದಲ್ಲಿ ಮತ್ತೆ ನಿರ್ಮಾಣ ಚಟುವಟಿಕೆ ಕೈಗೊಳ್ಳದಂತೆ ಮನವಿ
ಬೆಂಗಳೂರು: ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಶನಿವಾರವೂ ಮುಂದುವರಿದಿದ್ದು, ಒಟ್ಟು 13.80 ಕಿ.ಮೀ. ಉದ್ದದ ಫುಟ್‌ಪಾತ್ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ.
ಉತ್ತರ ಪಾಲಿಕೆ ವ್ಯಾಪ್ತಿಯ ಟ್ಯಾನರಿ ರಸ್ತೆ, ಎಂ.ಎಸ್. ಪಾಳ್ಯ, ದಾಸರಹಳ್ಳಿಯ ಕಮ್ಮಾರನಹಳ್ಳಿಯ ವಿವಿಧ ಸ್ಥಳಗಳಲ್ಲಿ ಒಟ್ಟು 2.80 ಕಿ.ಮೀ. ಉದ್ದದಷ್ಟು ತೆರವು ಕಾರ್ಯವನ್ನು ಕೈಗೊಳ್ಳಲಾಯಿತು. 3 ಜೆಸಿಬಿ, 8 ಟ್ರ್ಯಾಕ್ಟರ್, 2 ಟಿಪ್ಪರ್ ಹಾಗೂ 50 ಕಾರ್ಮಿಕರನ್ನು ಬಳಸಿಕೊಳ್ಳಲಾಯಿತು.
ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಕಗ್ಗದಾಸಪುರ ಮುಖ್ಯರಸ್ತೆ, ಮಲ್ಲೇಶ್ವರದ ಎಂ.ಡಿ. ಬ್ಲಾಕ್, ರಸೆಲ್ ಮಾರುಕಟ್ಟೆಯ ಚಾಂದಿನಿ ಚೌಕ್ ವೃತ್ತ, ಚಾಮರಾಜಪೇಟೆಯ ಟಿ.ಆರ್. ಮಿಲ್ ರಸ್ತೆ, ಅಶೋಕ ಪಿಲ್ಲರ್-ಸಿದ್ದಾಪುರ ಜಂಕ್ಷನ್ ಪ್ರದೇಶವೂ ಸೇರಿ ಒಟ್ಟು 4.90 ಕಿ.ಮೀ. ಉದ್ದದಷ್ಟು ತೆರವು ಕಾರ್ಯವನ್ನು ಕೈಗೊಳ್ಳಲಾಯಿತು. ರಸೆಲ್ ಮಾರುಕಟ್ಟೆ ಬಳಿ ತೆರವು ವೇಳೆ ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಪಶ್ಚಿಮ ಪಾಲಿಕೆ ಪ್ರದೇಶದಲ್ಲಿ ಬಸವನಗುಡಿಯ ಜಿಂಕೆ ಪಾರ್ಕ್-ಬಂಡೆಮಹಾಕಾಳಿಯಮ್ಮ ದೇವಸ್ಥಾನ ರಸ್ತೆ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ, ಯಡಿಯೂರಿನ ಕಾಮಾಕ್ಯ ಮುಖ್ಯರಸ್ತೆ ಹಾಗೂ ಹೆಗ್ಗನಹಳ್ಳಿಯ ಕರೀಂಸಾಬ್ ಲೇಔಟ್ ಮುಖ್ಯರಸ್ತೆ ಸೇರಿ ಒಟ್ಟು 3 ಕಿ.ಮೀ. ಉದ್ದದಷ್ಟು ಪಾದಚಾರಿ ಮಾರ್ಗವನ್ನು ಒತ್ತುವರಿಮುಕ್ತ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.