ಬೆಂಗಳೂರು

ಟ್ರಾಫಿಕ್ ಪಾರ್ಕ್ ಸ್ಥಾಪನೆಗೆ ₹1.66 ಕೋಟಿ ನೆರವು

ಶಿಲಾನ್ಯಾಸ ನೆರವೇರಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸಲು ‘ಟ್ರಾಫಿಕ್ ಪಾರ್ಕ್’ ಅತ್ಯಂತ ಅವಶ್ಯಕವಾಗಿದ್ದು, ಶೀಘ್ರದಲ್ಲೇ ತಲೆ ಎತ್ತಿ ನಿಲ್ಲಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಥಣಿಸಂದ್ರದಲ್ಲಿರುವ ಸಂಚಾರ ತರಬೇತಿ ಮತ್ತು ರಸ್ತೆ ಸುರಕ್ಷತಾ ಸಂಸ್ಥೆಯ ಆವರಣದಲ್ಲಿ ಗುರುವಾರ ಉದ್ಯಾನವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ರಸ್ತೆ ಸುರಕ್ಷತೆ ಕಾಪಾಡುವುದು ಕೇವಲ ಸಂಚಾರ ಪೊಲೀಸರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದರು.

ಹೋಂಡಾ ಇಂಡಿಯಾ ಫೌಂಡೇಷನ್ ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಕಾರ್ಯಕ್ರಮದಡಿ ಒಟ್ಟು 1.66 ಕೋಟಿ ರೂ. ನೆರವು ನೀಡುತಿದ್ದು, ಈ ಪೈಕಿ ಸಂಚಾರ ಉದ್ಯಾನವನದ ಸ್ಥಾಪನೆಗೆ 1 ಕೋಟಿ ರೂ. ಹಾಗೂ 20 ಗಸ್ತು ದ್ವಿಚಕ್ರ ವಾಹನಗಳಿಗೆ 66 ಲಕ್ಷ ರೂ. ನೆರವು ಕೊಡಲಿದೆ ಎಂದರು.

ಸ್ಥಾಪನೆಯಾಗಲಿರುವ ಟ್ರಾಫಿಕ್ ಪಾರ್ಕ್ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಕುರಿತು ಪ್ರಾಯೋಗಿಕ ಜ್ಞಾನ ನೀಡುವ ಕೇಂದ್ರವಾಗಲಿದೆ. ಈ ಉದ್ಯಾನವನದಲ್ಲಿ ಮಾದರಿ ರಸ್ತೆಗಳು, ರಸ್ತೆ ಕೂಡು ಸ್ಥಳಗಳು, ಸಂಚಾರ ದೀಪಗಳು, ರಸ್ತೆ ಸೂಚನಾ ಫಲಕಗಳು ಮತ್ತು ಪಾದಚಾರಿ ದಾಟುವ ಸ್ಥಳಗಳನ್ನು ನಿರ್ಮಿಸಲಾಗುತ್ತದೆ. ಇದರ ಮೂಲಕ ಮಕ್ಕಳು ನೈಜ ರಸ್ತೆ ಪರಿಸ್ಥಿತಿ ಹೋಲುವ ವಾತಾವರಣದಲ್ಲಿ ಸಂಚಾರ ನಿಯಮ ಕಲಿಯಲು ಸಾಧ್ಯವಾಗಲಿದೆ ಎಂದು ವಿವರಿಸಿದರು.

ಉತ್ತರ ಬೆಂಗಳೂರಿನವರಿಗೆ ಈ ಸೌಲಭ್ಯ ಪ್ರಯೋಜನವಾಗಲಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ರಸ್ತೆ ಸುರಕ್ಷತೆಯ ಅರಿವು ಬೆಳೆಸುವುದು, ಸಂಚಾರ ನಿಯಮಗಳ ಮಹತ್ವ ತಿಳಿಸುವುದು ಮತ್ತು ಸುರಕ್ಷಿತ ರಸ್ತೆ ಬಳಕೆಯ ಅಭ್ಯಾಸಗಳನ್ನು ರೂಪಿಸುವುದು ಇಂತಹ ತರಬೇತಿ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಹೋಂಡಾ ಇಂಡಿಯಾ ಫೌಂಡೇಷನ್ ವತಿಯಿಂದ ಒದಗಿಸಲಾದ 20 ಹೊಸ ಗಸ್ತು ಮೋಟಾರ್‌ಸೈಕಲ್‌ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಸೇವೆಗೆ ಚಾಲನೆ ನೀಡಿದರು.

ಈ ವೇಳೆ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹಾಗೂ ಹೋಂಡಾ ಸಂಸ್ಥೆಯ ಪ್ರತಿನಿಧಿಗಳಿದ್ದರು.

2.53 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತಾ ತರಬೇತಿ

ವಿದ್ಯಾರ್ಥಿಗಳಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸುವ ಉದ್ದೇಶದಿಂದ ಜಾರಿಯಲ್ಲಿರುವ ವಿದ್ಯಾರ್ಥಿಗಳ ರಸ್ತೆ ಸುರಕ್ಷತಾ ಸಂಘವು 2026ರ ಜನವರಿಯಿಂದ ಈವರೆಗೆ 2,53,245 ಶಾಲಾ ಮಕ್ಕಳಿಗೆ ತರಬೇತಿ ನೀಡಿದೆ ಎಂದು ಸಚಿವರು ತಿಳಿಸಿದರು.