- ಎಸ್‌ಐಆರ್ ನಮೂನೆಯಲ್ಲಿ 2002ರ ಮತಪಟ್ಟಿಯ ವಿವರ ತುಂಬಲು ಸಮಸ್ಯೆ
- ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಹಲವೆಡೆ ಹಳೆಯ ಪಟ್ಟಿ ಸಿಗದೆ ಜನರ ಪರದಾಟ
- ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರೂ ಪರಿಹಾರ ಸಿಕ್ಕಿಲ್ಲವೆಂದು ಆಕ್ಷೇಪ
ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೊಡಿಗೇಹಳ್ಳಿ ಗ್ರಾಮದ ಹಳೆಯ 10 ಬೂತ್‌ಗಳಲ್ಲಿನ ಮತದಾರರ ಪಟ್ಟಿಯಲ್ಲಿದ್ದ 15 ಸಾವಿರ ವೋಟರ್ಸ್ ಹೆಸರುಗಳು ಚುನವಣಾ ಆಯೋಗದ ವೆಬ್ಸೈಟ್‌ನಲ್ಲಿ ಪ್ರಕಟಿಸಿಲ್ಲ. ಇದರಿಂದಾಗಿ ಎಸ್‌ಐಆರ್ ನಮೂನೆಯಲ್ಲಿ 2002ರ ಪಟ್ಟಿಯ ವಿವರಗಳನ್ನು ನಮೂದಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಸ್ಥಳೀಯ ಮುಖಂಡರು ಹಾಗೂ ಮಾಜಿ ಕಾರ್ಪೋರೇಟರ್‌ಗಳು ಆಯೋಗದ ಮೊರೆ ಹೋಗಿವೆ.
2002ರ ಮತಪಟ್ಟಿಯಲ್ಲಿ ಕೊಡಿಗೇಹಳ್ಳಿಗೆ ಸೇರಿದ 206ರಿಂದ 215ನೇ ಸಂಖ್ಯೆಯ ಮತಗಟ್ಟೆಗಳಲ್ಲಿ 15 ಸಾವಿರ ಮತದಾರರ ಹೆಸರು ಇತ್ತು. ಇಷ್ಟು ಮಂದಿ ಪ್ರಸ್ತುತ ಜಿಬಿಎನ ಹೊಸ ವಾರ್ಡ್‌ಗಳಾದ ಕೊಡಿಗೇಹಳ್ಳಿ, ತಿಂಡ್ಲು, ದೊಡ್ಡ ಬೊಮ್ಮಸಂದ್ರ, ವಿದ್ಯಾರಣ್ಯಪುರ, ರಾಜೀವ್‌ಗಾಂಧಿನಗರ ಹಾಗೂ ಬ್ಯಾಟರಾಯನಪುರ ವಾರ್ಡ್‌ಗಳಲ್ಲಿ ಹಂಚಿಹೋಗಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಕಾಯಂ ನಿವಾಸಿಗಳಾಗಿದ್ದು, ಈಗ ಸಮೀಪದ ಬಡಾವಣೆಗಳಲ್ಲಿ ನೆಲೆಸಿದ್ದಾರೆ. ಅಲ್ಲದೆ ಕೊಡಿಗೇಹಳ್ಳಿ, ತಿಂಡ್ಲು, ದೊಡ್ಡ ಬೊಮ್ಮಸಂದ್ರ ಹಾಗೂ ಬ್ಯಾಟರಾಯನಪುರ ಹಳೇ ಗ್ರಾಮಗಳಾಗಿದ್ದು, ಹಾಲಿ ಎಸ್‌ಐಆರ್ ಪರಿಷ್ಕರಣೆ ಕಾರ್ಯದಲ್ಲಿ ಸ್ಥಳೀಯ ಜನರು ನಮೂನೆ ಭರ್ತಿ ಮಾಡಿ ವಾಪಸ್ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಅಶ್ವತ್ಥನಾರಾಯಣ ಗೌಡ ಅವರು ರಾಜ್ಯ, ಕೇಂದ್ರ ಚುನಾವಣಾ ಆಯೋಗ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗೆ ಪ್ರತ್ಯೇಕ ದೂರು ನೀಡಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಮನವಿಪತ್ರ ಸಲ್ಲಿಸಿದ್ದಾರೆ.
ಬಿಎಲ್‌ಒಗಳ ಬಳಿಯೂ ಸಿಗದ ಪಟ್ಟಿ:
2002ರಲ್ಲಿ ಕೊಡಿಗೇಹಳ್ಳಿ ಹಾಗೂ ಇತರ ವಾರ್ಡ್‌ಗಳು ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಹೊಸದಾಗಿ ಬ್ಯಾಟರಾಯನಪುರ ಮತಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಇದರಿಂದಾಗಿ ನೂತನವಾಗಿ ರೂಪುಗೊಂಡ ಕ್ಷೇತ್ರಗಳಿಗೆ 2002ರ ಮತದಾರರ ಪಟ್ಟಿಯನ್ನು ವರ್ಗೀಕರಿಸುವಲ್ಲಿ ಅಧಿಕಾರಿ ವರ್ಗ ವಿಲವಾಗಿದ್ದಾರೆ. ಜತೆಗೆ ಈ ತಪ್ಪನ್ನು ಆಯೋಗ ಕೂಡ ಪರಾಮರ್ಶೆ ನಡೆಸದ ಕಾರಣ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ. ಬಿಎಲ್‌ಒಗಳ ಬಳಿಯೂ ಪಟ್ಟಿ ಸಿಗದ ಕಾರಣ ಹೆಚ್ಚಿನ ಮಂದಿ ಭರ್ತಿ ಮಾಡಿದ ನಮೂನೆ ಹಿಂದಿರುಗಿಸುತ್ತಿಲ್ಲ. ಹಾಗಾಗಿ ತಕ್ಷಣವೇ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಹಳೆಯ ಹತ್ತೂ ಬೂತ್‌ಗಳ ಮತಪಟ್ಟಿಯನ್ನು ಅಪ್‌ಲೋಡ್ ಮಾಡಬೇಕು. ಅಲ್ಲದೆ ನಮೂನೆ ಭರ್ತಿ ಮಾಡಲು ಮತದಾರರಿಗೆ ಹೆಚ್ಚುವರಿ ಸಮಯವನ್ನು ನೀಡಬೇಕು ಎಂದು ಅಶ್ವತ್ಥನಾರಾಯಣ ಗೌಡ ಆಗ್ರಹಿಸಿದ್ದಾರೆ.
ಈ ವೇಳೆ ಮಾಜಿ ಕಾರ್ಪೋರೇಟರ್‌ಗಳಾದ ಪಿಳ್ಳಪ್ಪ, ನಂದಿನಿ ಶ್ರೀನಿವಾಸ್, ಸ್ಥಳೀಯ ಮುಖಂಡರಾದ ನಾರಾಯಣಸ್ವಾಮಿ, ಮೋಹನ್‌ರಾಜ್ ಹಾಜರಿದ್ದರು.
ಮತಹಕ್ಕು ಕಸಿದರೆ ಹೋರಾಟ:
ಬ್ಯಾಟರಾಯನಪುರ ಮತಕ್ಷೇತ್ರದ ಹಲವಾರು ಗ್ರಾಮಗಳಲ್ಲಿ 2002ರ ವೋಟರ್ ಲಿಸ್ಟ್‌ನಲ್ಲಿ ಭಾರಿ ವ್ಯತ್ಯಾಸವಾಗಿದೆ. ಕೆಲವೊಂದು ಮತಗಟ್ಟೆಗಳಲ್ಲಿ ಇಡೀ ಬೂತ್‌ಗಳಲ್ಲಿನ ಮತದಾರರ ಹೆಸರನ್ನು ನಾಪತ್ತೆ ಮಾಡಲಾಗಿದೆ. ಈ ಲೋಪವನ್ನು ಚುನಾವಣಾ ಆಯೋಗ ಸರಿಪಡಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ‘ಬಯಪಾ’ ಮಾಜಿ ಅಧ್ಯಕ್ಷ ಎ.ರವಿ ತಿಳಿಸಿದ್ದಾರೆ.