- ಮಾಸಾಂತ್ಯದೊಳಗೆ ಕೊನೆಯ ರೈಲು ಪೂರೈಕೆ
ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆಗೆ ಇನ್ನಷ್ಟು ವೇಗ ನೀಡುವುದಕ್ಕಾಗಿ 14ನೇ ಮೆಟ್ರೋ ರೈಲು ಹೆಬ್ಬಗೋಡಿ ಡಿಪೋ ಸೇರಿದೆ. ಜು.9ರಂದು ರೈಲು ಆಗಮಿಸಿದ್ದು, ಕಪ್ಲರ್ ಹಾಗೂ ಗ್ಯಾಂಗ್ವೇ ಅಳವಡಿಕೆ ಪೂರ್ಣಗೊಂಡ ನಂತರ ಇನ್ಸ್ಪೆಕ್ಷನ್ ಬೇ ಲೈನ್ಗೆ ಸ್ಥಳಾಂತರಿಸಲಾಗಿದೆ.
ರೈಲಿನ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ಥಿರ ತಪಾಸಣೆ ನಡೆಸಲಾಗುತ್ತದೆ. ನಂತರ ಕಡ್ಡಾಯವಾಗಿರುವ 750 ಕಿ.ಮೀ. ಡೈನಾಮಿಕ್ ಪರೀಕ್ಷೆ ಮುಖ್ಯ ಮಾರ್ಗದಲ್ಲೇ (ರಾತ್ರಿ ವೇಳೆ) ನಡೆಯಲಿದೆ. ಈ ಪ್ರಕ್ರಿಯೆಗಳಾದ ಮೇಲೆ ವಾಣಿಜ್ಯ ಸೇವೆಗೆ ಅನುಮೋದನೆ ನೀಡಲಾಗುತ್ತದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕೊಲ್ಕತ್ತಾ ಸಮೀಪದ ತಿತಾಗಢ ರೈಲು ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆ ಹಳದಿ ಮಾರ್ಗಕ್ಕಾಗಿ 15 ರೈಲುಗಳನ್ನು ತಯಾರಿಸುತ್ತಿದ್ದು, 14ನೇ ರೈಲು ಈಗಾಗಲೇ ತಲುಪಿದೆ. ಕೊನೆಯ ರೈಲು ಜುಲೈ ಅಂತ್ಯದೊಳಗೆ ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ. ಎಲ್ಲ ರೈಲುಗಳು ಸೇವೆಗೆ ಸೇರ್ಪಡೆಯಾದ ಬಳಿಕ ಜನದಟ್ಟಣೆ ಅವಧಿಯಲ್ಲಿ 4&5 ನಿಮಿಷಗಳ ಅಂತರದಲ್ಲಿ ರೈಲು ಸಂಚಾರ ನಡೆಸುವ ಸಾಧ್ಯತೆ ಇದೆ. 15ರಲ್ಲಿ 13 ರೈಲುಗಳನ್ನು ನಿಯಮಿತ ಪ್ರಯಾಣಿಕರ ಸೇವೆಗೆ ಬಳಸಲಾಗಲಿದ್ದು, ಉಳಿದ ಎರಡು ರೈಲುಗಳನ್ನು ತುರ್ತು ಪರಿಸ್ಥಿತಿ, ನಿರ್ವಹಣಾ ಕಾಮಗಾರಿ ಹಾಗೂ ತಾಂತ್ರಿಕ ಸಮಸ್ಯೆಗಳ ಸಂದರ್ಭಗಳಲ್ಲಿ ಮೀಸಲು ಸಂಗ್ರಹವಾಗಿ ಕಾಯ್ದಿರಿಸಲಾಗುತ್ತದೆ. ಆಗಸ್ಟ್ ಅಂತ್ಯದೊಳಗೆ ಸಂಪೂರ್ಣ ರೈಲು ಪಡೆ ಕಾರ್ಯಾಚರಣೆಗೆ ಸಜ್ಜಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
19.75 ಕಿ.ಮೀ. ಉದ್ದದ ಹಳದಿ ಮಾರ್ಗದಲ್ಲಿ 10 ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಗರಿಷ್ಠ ಸಂಚಾರದ ವೇಳೆಯಲ್ಲಿ ಸುಮಾರು 7 ನಿಮಿಷ ಹಾಗೂ ಇತರ ವೇಳೆಯಲ್ಲಿ 10 ನಿಮಿಷಗಳ ಅಂತರದಲ್ಲಿ ಸೇವೆ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.