ಜಿಬಿಎ 
ಬೆಂಗಳೂರು

ವರ್ಷಾಂತ್ಯಕ್ಕೆ 144 ಕಿ.ಮೀ. ಎಸ್​ಟಿಆರ್​ ರಸ್ತೆ ಸಂಚಾರಕ್ಕೆ!

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಭಾರಿ ವಾಹನಗಳ ಒತ್ತಡ ಕಡಿತಕ್ಕೆ ಬಲ
  • ಕೈಗಾರಿಕೆ, ವಿಮಾನ ನಿಲ್ದಾಣ ಸಂಪರ್ಕಕ್ಕೂ ಹೊಸ ವೇಗ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜಧಾನಿಯ ಸಂಚಾರ ದಟ್ಟಣೆ ಸಮಸ್ಯೆಗೆ ಅಲ್ಪ ಪ್ರಮಾಣದ ಪರಿಹಾರ ನೀಡಬಲ್ಲ ಸ್ಯಾಟಲೈಟ್​ ಟೌನ್​ ವರ್ತುಲ ರಸ್ತೆ (ಎಸ್​ಟಿಆರ್​ಆರ್​) ಯೋಜನೆಯ 288 ಕಿ.ಮೀ. ಪೈಕಿ ಸುಮಾರು 144 ಕಿ.ಮೀ. ರಸ್ತೆ 2026ರ ನವೆಂಬರ್​ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ಈ ರಸ್ತೆ ದಾಬಸ್​ಪೇಟೆಯಿಂದ ಹೊಸಕೋಟೆ, ದೇವನಹಳ್ಳಿ, ಹೊಸೂರುವರೆಗೆ ಸಂಪರ್ಕ ಕಲ್ಪಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿಗಳ ನಡುವಿನ ವಾಹನಗಳಿಗೆ ನಗರ ಪ್ರವೇಶಿಸದೆ ಪರ್ಯಾಯ ಮಾರ್ಗ ಒದಗಿಸಲಿದೆ.
ಒಟ್ಟು 288 ಕಿ.ಮೀ. ಉದ್ದದ ಎಸ್​ಟಿಆರ್​ಆರ್​ ಯೋಜನೆಯಲ್ಲಿ ಕರ್ನಾಟಕದಲ್ಲಿ 243 ಕಿ.ಮೀ. ಹಾಗೂ ತಮಿಳುನಾಡಿನಲ್ಲಿ 45 ಕಿ.ಮೀ. ರಸ್ತೆ ನಿಮಾರ್ಣವಾಗುತ್ತಿದೆ. 144 ಕಿ.ಮೀ. ಮೊದಲ ಹಂತದ ಕಾಮಗಾರಿ 14,655 ಕೋಟಿ ರೂ. ವೆಚ್ಚದಲ್ಲಿ ಆರು ಪ್ಯಾಕೇಜ್​ಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಈಗಾಗಲೇ ದಾಬಸ್​ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ನಡುವಿನ ಸುಮಾರು 80 ಕಿ.ಮೀ. ರಸ್ತೆ ಎರಡು ವರ್ಷಗಳಿಂದ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಕರ್ನಾಟಕ&ತಮಿಳುನಾಡು ಗಡಿಯತ್ತ ಸಾಗುವ 21 ಕಿ.ಮೀ. ಹೊಸ ಗ್ರೀನ್​ಫೀಲ್ಡ್​ ರಸ್ತೆ ಶೇ.94.89 ಪೂರ್ಣಗೊಂಡಿದ್ದು, ನವೆಂಬರ್​ ವೇಳೆಗೆ ಕಾಮಗಾರಿ ಮುಗಿಯುವ ಗುರಿ ಹೊಂದಲಾಗಿದೆ.
ಬೆಂಗಳೂರು&ಚೆನ್ನೆ$ ರೈಲು ಮಾರ್ಗದ ಲಿಂಗದೀರಮಲ್ಲಸಂದ್ರದಲ್ಲಿ 50 ಮೀಟರ್​ ಬೋಸ್ಟ್ರಿಂಗ್​ ಗರ್ಡರ್​ ಅಳವಡಿಕೆಗೆ ನೈಋತ್ಯ ರೈಲ್ವೆ ಅನುಮತಿ ನೀಡಿರುವುದು ಯೋಜನೆಗೆ ಹೊಸ ಚೈತನ್ಯ ತಂದಿದೆ. ಗರ್ಡರ್​ ಅಳವಡಿಕೆಯ ಬಳಿಕ ಡೆಕ್​ ಸ್ಲ್ಯಾಬ್​ ನಿಮಾರ್ಣ, ರಸ್ತೆ ಹಾಸು, ಕಾಂಕ್ರೀಟ್​ ಕ್ಯೂರಿಂಗ್​, ಸುರಕ್ಷತಾ ವ್ಯವಸ್ಥೆಗಳ ಅಳವಡಿಕೆ ಹಾಗೂ ಲೋಡ್​ ಪರೀಕ್ಷೆ ಸೇರಿ ಅಂತಿಮ ಹಂತದ ಕಾಮಗಾರಿಗಳು ಪೂರ್ಣಗೊಂಡ ಬಳಿಕ ರಸ್ತೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬೆಳಗೊಂಡಪಳ್ಳಿವರೆಗೆ ನಿಮಾರ್ಣವಾಗುತ್ತಿರುವ 36 ಕಿ.ಮೀ. ಸಂಪರ್ಕ ರಸ್ತೆ ಕೂಡ ಶೇ.91.32 ಪೂರ್ಣಗೊಂಡಿದೆ. ಈ ಭಾಗದ 7 ಕಿ.ಮೀ. ಬೆಂಗಳೂರು&ಚೆನ್ನೆ$ ಎಕ್ಸ್​ಪ್ರೆಸ್​ವೇಗೆ ಸಂಪರ್ಕ ಕಲ್ಪಿಸುವ ಮೂಲಕ ಎರಡೂ ಯೋಜನೆಗಳು ಒಂದಕ್ಕೊಂದು ಪೂರಕವಾಗಲಿವೆ.

ಬೆಂಗಳೂರು ಅಭಿವೃದ್ಧಿಗೆ ನೆರವು ಹೇಗೆ?

ಎಸ್​ಟಿಆರ್​ಆರ್​ ಕಾರ್ಯಾರಂಭವಾದ ಬಳಿಕ ಹೊಸೂರು ರಸ್ತೆ&ಸಿಲ್ಕ್​ ಬೋರ್ಡ್​, ಎಲೆಕ್ಟ್ರಾನಿಕ್ಸ್​ ಸಿಟಿ&ನೈಸ್​ ರಸ್ತೆ ಹಾಗೂ ತುಮಕೂರು ರಸ್ತೆಯ ಮೇಲಿನ ಭಾರೀ ವಾಹನಗಳ ಒತ್ತಡ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಸರಕು ಸಾಗಣೆ ವಾಹನಗಳು ನಗರ ಪ್ರವೇಶಿಸದೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಪಡೆಯುವುದರಿಂದ ನಗರ ಸಂಚಾರ ಸುಗಮವಾಗಲಿದೆ.

ಹೊಸೂರು-ಕೆಐಎ ಸಂಪರ್ಕ 

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸೂರಿನಿಂದ ತೆರಳುವ ಪ್ರಯಾಣಿಕರಿಗೆ ವೇಗವಾದ ಪರ್ಯಾಯ ಮಾರ್ಗ ಲಭ್ಯವಾಗಲಿದೆ. ಕೈಗಾರಿಕಾ ವಲಯಗಳು, ಗೋದಾಮುಗಳು, ಲಾಜಿಸ್ಟಿಕ್ಸ್​ ಪಾರ್ಕ್​ಗಳು ಹಾಗೂ ಸ್ಯಾಟಲೈಟ್​ ಟೌನ್​ಗಳ ಬೆಳವಣಿಗೆಗೂ ಎಸ್​ಟಿಆರ್​ಆರ್​ ಹೊಸ ಉತ್ತೇಜನ ನೀಡಲಿದ್ದು, ನಗರದ ಸಮತೋಲನ ಅಭಿವೃದ್ಧಿಗೆ ಈ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ.

ನೆಲಮಂಗಲ&ಬನ್ನೇರುಘಟ್ಟ ಅನುಮೋದನೆಯಾಗಿಲ್ಲ

ನೆಲಮಂಗಲ&ಕುಣಿಗಲ್​&ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರದೇಶದ ಮೂಲಕ ಹೊಸೂರಿಗೆ ಸಂಪರ್ಕ ಕಲ್ಪಿಸುವ ಉಳಿದ 144 ಕಿ.ಮೀ. ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ಇನ್ನೂ ದೊರಕಿಲ್ಲ. ಈ ಭಾಗಕ್ಕೆ ಶೀಘ್ರ ಅನುಮೋದನೆ ದೊರೆತರೆ ಬೆಂಗಳೂರು ಸುತ್ತ ಸಂಪೂರ್ಣ ವರ್ತುಲ ರಸ್ತೆ ಜಾಲ ನಿಮಾರ್ಣವಾಗಲಿದ್ದು, ನಗರದ ಸಂಚಾರ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ಸಾಧ್ಯವಾಗಲಿದೆ.