ಮೆಟ್ರೋ 
ಬೆಂಗಳೂರು

ಪಿಎಸ್​ಡಿ ಅಳವಡಿಕೆಗೆ 1,274 ಕೋಟಿ ರೂ.

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • 177 ಮೆಟ್ರೋ ನಿಲ್ದಾಣಗಳಲ್ಲಿ ಅನುಷ್ಠಾನ ಉದ್ದೇಶ
  • ಆತ್ಮಹತ್ಯೆ, ಆಕಸ್ಮಿಕ ಅಪಘಾತಗಳಿಗೆ ಕಡಿವಾಣ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್​ಸಿಎಲ್​), ಒಟ್ಟು 177 ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್​ಫಾಮ್​ರ್ ಸ್ಕ್ರೀನ್​ ಡೋರ್​ (ಪಿಎಸ್​ಡಿ) ಅಳವಡಿಸಲು 1,274 ಕೋಟಿ ರೂ. ವೆಚ್ಚದ ಸಮಗ್ರ ಯೋಜನೆ ರೂಪಿಸಿದೆ.
ಪ್ರಸ್ತುತ ನಮ್ಮ ಮೆಟ್ರೋ ಜಾಲದಲ್ಲಿ 83 ನಿಲ್ದಾಣಗಳಿದ್ದು, ಹೆಬ್ಬಾಳ&ಸರ್ಜಾಪುರ ಸಂಪರ್ಕಿಸುವ 3ನೇ ಹಂತದ '3ಎ' ಕಾರಿಡಾರ್​ ಪೂರ್ಣಗೊಂಡ ಬಳಿಕ ನಿಲ್ದಾಣಗಳ ಸಂಖ್ಯೆ ಸುಮಾರು 191ಕ್ಕೆ ಏರಲಿದೆ. ಈಗಾಗಲೇ ಗುಲಾಬಿ ಮಾರ್ಗದ 26 ಹಾಗೂ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದ ಎರಡು ನಿಲ್ದಾಣಗಳಲ್ಲಿ ಪಿಎಸ್​ಡಿ ಅಳವಡಿಕೆ ಆರಂಭಿಸಲಾಗಿದೆ.
ಮೆಟ್ರೋ ಆರಂಭವಾದ ದಿನಗಳಿಂದಲೇ ಪ್ಲಾಟ್​ಫಾಮ್​ರ್ ಸುರಕ್ಷತೆಯನ್ನು ಹೆಚ್ಚಿಸಲು ಪಿಎಸ್​ಡಿ ಅಳವಡಿಸುವಂತೆ ಸಾರ್ವಜನಿಕರು ಹಾಗೂ ತಜ್ಞರು ಒತ್ತಾಯಿಸುತ್ತಿದ್ದರು. ಸದ್ಯ ಮೆಜೆಸ್ಟಿಕ್​ ಮತ್ತು ಆರ್​.ವಿ.ರೋಡ್​ ಇಂಟರ್​ಚೇಂಜ್​ ನಿಲ್ದಾಣಗಳಲ್ಲಿ ಸ್ಟೀಲ್​ ಬ್ಯಾರಿಕೇಡ್​ಗಳಿವೆ. ಉಳಿದ ನಿಲ್ದಾಣಗಳಲ್ಲಿ ಪ್ಲಾಟ್​ಫಾಮ್​ರ್ ಅಂಚು ನೇರವಾಗಿ ಟ್ರ್ಯಾಕ್​ಗೆ ಹೊಂದಿಕೊಂಡಿರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿದೆ.
ಯೋಜನೆಯಡಿ ನೇರಳೆ, ಹಸಿರು, ಹಳದಿ, ನೀಲಿ ಹಾಗೂ ಮೂರನೇ ಹಂತದ ಜೆ.ಪಿ.ನಗರ&ಕೆಂಪಾಪುರ ಮತ್ತು ಹೊಸಹಳ್ಳಿ&ಕಡಬಗೆರೆ ಮಾರ್ಗಗಳ ನಿಲ್ದಾಣಗಳಲ್ಲೂ ಪಿಎಸ್​ಡಿ ಅಳವಡಿಸಲು ಉದ್ದೇಶಿಸಲಾಗಿದೆ. ಎತ್ತರಿಸಿದ ನಿಲ್ದಾಣಗಳಲ್ಲಿ ಅರ್ಧ ಎತ್ತರದ ಹಾಗೂ ಭೂಗತ ನಿಲ್ದಾಣಗಳಲ್ಲಿ ಪೂರ್ಣ ಎತ್ತರದ ಸ್ಕ್ರೀನ್​ ಡೋರ್​ಗಳನ್ನು ಅಳವಡಿಸಲಾಗುತ್ತದೆ.
ಪಿಎಸ್​ಡಿ ಖರೀದಿಗೆ 747 ಕೋಟಿ ರೂ., ಸಿವಿಲ್​ ಕಾಮಗಾರಿಗೆ 317 ಕೋಟಿ ರೂ. ಹಾಗೂ ಸಿಗ್ನಲಿಂಗ್​, ದೂರಸಂಪರ್ಕ ಮತ್ತು ವಿದ್ಯುತ್​ ಕಾಮಗಾರಿಗಳಿಗೆ 210 ಕೋಟಿ ರೂ. ವೆಚ್ಚವಾಗಲಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ಅಂದಾಜಿಸಿದ್ದಾರೆ. ಹೊಸದಾಗಿ ನಿಮಾರ್ಣಗೊಳ್ಳುವ ನಿಲ್ದಾಣಗಳಲ್ಲಿ ಪಿಎಸ್​ಡಿ ಅಳವಡಿಕೆ ಸುಲಭವಾದರೂ, ಈಗಾಗಲೇ ಕಾರ್ಯಾಚರಣೆಯಲ್ಲಿರುವ ನಿಲ್ದಾಣಗಳಲ್ಲಿ ತಾಂತ್ರಿಕ ಸವಾಲುಗಳ ನಡುವೆಯೂ ಈ ಕಾಮಗಾರಿ ಕೈಗೊಳ್ಳುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್​ ಸ್ಥಗಿತ ವ್ಯವಸ್ಥೆ
ಮೆಟ್ರೋ ಟ್ರ್ಯಾಕ್​ನಲ್ಲಿ 750 ವೋಲ್ಟ್​ ಡಿಸಿ ಥರ್ಡ್​ ರೈಲ್​ ಇರುವುದರಿಂದ ಯಾವುದೇ ವ್ಯಕ್ತಿ ಟ್ರ್ಯಾಕ್​ಗೆ ಇಳಿದ ಕೂಡಲೇ ತುರ್ತು ವಿದ್ಯುತ್​ ಸ್ಥಗಿತ ವ್ಯವಸ್ಥೆ ಸಕ್ರಿಯಗೊಳ್ಳುತ್ತದೆ. ಬಳಿಕ ರೈಲು ಸಂಚಾರವನ್ನು ಮರುಪ್ರಾರಂಭಿಸಲು 15ರಿಂದ 20 ನಿಮಿಷಗಳವರೆಗೆ ಸಮಯ ಬೇಕಾಗುತ್ತಿದ್ದು, ಸಂಪೂರ್ಣ ಮಾರ್ಗದ ಕಾರ್ಯಾಚರಣೆಯ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.