- ಹೆಚ್ಚು ಲಾಭ ಗಳಿಸುವ ಆಮಿಷಕ್ಕೆ ಉದ್ಯಮಿ ಬಲಿ
- ದಕ್ಷಿಣ ಸೈಬರ್ ಕ್ರೈಂ ಠಾಣೆಯಲ್ಲಿ ದೂರು
ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿ, ಉದ್ಯಮಿಯೊಬ್ಬರಿಗೆ ಸುಮಾರು 1.27 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ವಿಶ್ವೇಶ್ವರಯ್ಯಪುರ ನಿವಾಸಿ ನರೇಶ್ ಕುಮಾರ್ ಜೈನ್ (58) ವಂಚನೆಗೊಳಗಾದ ಉದ್ಯಮಿ. ಈ ಸಂಬಂಧ ದಕ್ಷಿಣ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
2025ರ ನವೆಂಬರ್‌ನಲ್ಲಿ ವಾಟ್ಸಾಪ್ ಮೂಲಕ ಸಂಪರ್ಕಿಸಿದ ಅಪರಿಚಿತ ವ್ಯಕ್ತಿಯೊಬ್ಬರು, ತಾವು ‘ಬಿಪಿ ಟ್ರೇಡಿಂಗ್ ಯುಕೆ’ ಕಂಪನಿಯ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದರು. ಆಗ ಚಿನ್ನ, ಬೆಳ್ಳಿ ಮತ್ತು ಕಚ್ಚಾ ತೈಲದಂತಹ ಕಮೋಡಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಭಾರಿ ಲಾಭ ಗಳಿಸಬಹುದು ಎಂದು ಉದ್ಯಮಿಯನ್ನು ನಂಬಿಸಿದ್ದರು.
ವಂಚಕರ ಮಾತಿಗೆ ಮರುಳಾದ ಉದ್ಯಮಿ, ಹೂಡಿಕೆ ಮಾಡಲು ಮುಂದಾಗುತ್ತಿದ್ದಂತೆ ಲಿಂಕ್‌ವೊಂದನ್ನು ಕಳುಹಿಸಿ ಟ್ರೇಡಿಂಗ್ ಖಾತೆ ತೆರೆದಿದ್ದರು. ಇದಾದ ಬಳಿಕ ‘ಡೇವಿಟ್ ರೈಟ್’ ಎಂಬ ವ್ಯಕ್ತಿ ವ್ಯಾಟ್ಸಪ್ ಕರೆ ಮಾಡಿ ತಾನು ಕಂಪನಿಯ ಅನಲಿಸ್ಟ್ ಎಂದು ಪರಿಚಯಿಸಿಕೊಂಡು ಟ್ರಯಲ್ ಟ್ರೇಡಿಂಗ್‌ಗೆ ಪ್ರೇರೆಪಿಸಿದ್ದ. ಆರಂಭದಲ್ಲಿ ಸಣ್ಣ ಮೊತ್ತದ ಹಣ ಹೂಡಿಕೆ ಮಾಡಿದಾಗ ಅಧಿಕ ಲಾಭ ಬಂದಂತೆ ತೋರಿಸಿದ್ದರು. ಇದಾದ ನಂತರ ಉದ್ಯಮಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 1,40,28,054 ರೂಪಾಯಿಗಳನ್ನು ಹೂಡಿಕೆ ಮಾಡಿದಾಗ ಕೇವಲ 12.60 ಲಕ್ಷ ರೂ.ಗಳನ್ನು ಲಾಭದ ರೂಪದಲ್ಲಿ ಹಿಂತಿರುಗಿಸಿ, ಉಳಿದ 1.27 ಕೋಟಿ ರೂ.ಗಳನ್ನು ನೀಡದೇ ವಂಚಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.