ಬೆಂಗಳೂರು: ಆಹಾರ ಸುರಕ್ಷತೆ ಇಲಾಖೆಯು ರಾಜ್ಯಾದ್ಯಂತ ಬಾಟಲಿಗಳಲ್ಲಿ ದೊರೆಯುವ ಕುಡಿಯುವ ನೀರಿನ ಘಟಕಗಳ ಮೇಲೆ ಕೈಗೊಂಡಿದ್ದ ಎರಡು ದಿನಗಳ ವಿಶೇಷ ತಪಾಸಣೆ ಕಾರ್ಯಚರಣೆಯಲ್ಲಿ 102 ಘಟಕಗಳ ಪರಿಶೀಲನೆ ನಡೆಸಿದ್ದು, ಅನೈರ್ಮಲ್ಯ ಹೊಂದಿದ್ದ 12 ಘಟಕಗಳಿಗೆ ಬೀಗ ಹಾಕಲಾಗಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಮೇರೆಗೆ ಈ ತಪಾಸಣೆಗೆ 23 ತಂಡಗಳನ್ನು ಇಲಾಖೆ ರಚಿಸಿತ್ತು. ಈ ತಂಡವು ವಿವಿಧ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿ, ನೀರು ಹಾಗೂ ಬಾಟಲಿಗಳನ್ನು ಪರಿಶೀಲಿಸಿತು. ಈ ವೇಳೆ ಕೆಲವೆಡೆ ಲೇಬಲ್ ಹೊಂದಾಣಿಕೆಯಾಗದಿರುವುದು, ಹಲವೆಡೆ ಸ್ವಚ್ಛತೆ ಇಲ್ಲದಿರುವುದನ್ನು ಹಾಗೂ ಕೀಟ ನಿಯಂತ್ರಣ ಪ್ರಮಾಣಪತ್ರ ಹೊಂದಿರದಿರುವುದನ್ನು ಅಧಿಕಾರಿಗಳು ಗುರುತಿಸಿದ್ದು, ನಿಯಮ ಉಲ್ಲಂಸಿದ 53 ಘಟಕಗಳಿಗೆ ನೋಟಿಸ್ ಜಾರಿಗೊಳಿಸಿದೆ. 69 ನೀರಿನ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮುಚ್ಚಲಾದ ಘಟಕಗಳಲ್ಲಿ ಹಾಸನ ಜಿಲ್ಲೆಯ ‘ಎಸ್.ಪಿ. ಫುಡ್ ಆ್ಯಂಡ್ ಬೆವರೇಜಸ್’, ಬೆಂಗಳೂರು ನಗರ ಜಿಲ್ಲೆಯ ‘ಅವಂತಿ ಇಂಡಸ್ಟ್ರೀಸ್’ ಮತ್ತು ‘ಓಂ ಶಕ್ತಿ ಮಿನರಲ್ಸ್’, ಬೀದರ್ ಜಿಲ್ಲೆಯ ‘ಸಾಯಿ ರಾಮ್ ಫುಡ್ ಬೆವರೇಜಸ್’, ಕಲಬುರಗಿಯ ‘ನಂದಿ ಫುಡ್ ಆ್ಯಂಡ್ ಬೆವರೇಜಸ್’ ಮತ್ತು ‘ಅಕ್ವಾ ರಿಫ್ರೆಶ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್’ ಹಾಗೂ ಮೈಸೂರು ಗ್ರಾಮಾಂತರದ ‘ಡಾಲಿಯಾ ಬೆವರೇಜಸ್’ ಘಟಕಗಳನ್ನು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಊಖಖಅಐ) ಕಡ್ಡಾಯ ಪರವಾನಗಿ ಇಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದ ಕಾರಣಕ್ಕಾಗಿ ಮುಚ್ಚಲಾಗಿದೆ.
ಇದೇ ವೇಳೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ‘ಎಂ.ಎಸ್. ಫುಡ್ ಆ್ಯಂಡ್ ಬೆವರೇಜಸ್’ ಘಟಕದಲ್ಲಿ ಲೇಬಲಿಂಗ್ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ, ಅಧಿಕಾರಿಗಳು 7,380 ಮೌಲ್ಯದ ಒಂದು ಲೀಟರ್ ಸಾಮರ್ಥ್ಯದ ಪ್ಯಾಕೇಜ್ಡ್ ಕುಡಿಯುವ ನೀರಿನ 82 ಕೇಸ್ಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯಾದ್ಯಂತ ವಿಶೇಷ ಪರಿಶೀಲನಾ ಅಭಿಯಾನ ಮುಂದುವರಿಯಲಿದ್ದು,’ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006’ ಹಾಗೂ ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸುವ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.