- ಒಂದೇ ತಿಂಗಳಿನಲ್ಲಿ ಅತ್ಯಧಿಕ ಪಬ್ಲಿಷ್ ಕಂಡ ಕನ್ನಡದ ಕೃತಿ
- ಶೀಘ್ರವೇ 11, 12ನೇ ಮುದ್ರಣ ಆಗಲಿದೆ ಎಂದಿರುವ ಎನ್.ಆರ್. ರಮೇಶ್
ಬೆಂಗಳೂರು: ಪ್ರಥಮ ಮುದ್ರಣ ಬಿಡುಗಡೆಯಾದ 28 ದಿನಗಳಲ್ಲಿ 10ನೇ ಮುದ್ರಣವನ್ನು ಕಂಡಿರುವ ‘ಲೀಲಮ್ಮ ನಿನ್ನ ಗಂಡ ಯಾರಮ್ಮ? ಪುಸ್ತಕವನ್ನು ಸೋಮವಾರ ಮರುಬಿಡುಗಡೆ ಕಂಡಿದೆ.
ನಗರದಲ್ಲಿ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 10ನೇ ಮುದ್ರಣದ ಪುಸ್ತಕವನ್ನು ಹಿರಿಯ ಪತ್ರಕರ್ತ ಬಿ.ಗಣಪತಿ ಅವರು ಲೋಕಾರ್ಪಣೆ ಮಾಡಿದರು. ಈ ವೇಳೆ ಬಿಡುಗಡೆ ಮಾಡಲಾದ ಅಷ್ಟೂ ಪುಸ್ತಕಗಳನ್ನು ಡಾ. ರಾಜ್ ಕುಮಾರ್ ಅಭಿಮಾನಿ ಸಂಘದ ಮಾಗಡಿ ರಸ್ತೆ ಹಾಗೂ ಕೃಷ್ಣರಾಜಪುರ ಶಾಖೆಗಳ ಸದಸ್ಯರು ಸ್ಥಳದಲ್ಲಿಯೇ ಖರೀದಿಸಿದರು.
ಈ ವೇಳೆ ಮಾತನಾಡಿದ ಕೃತಿಯ ಲೇಖಕ, ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್. ರಮೇಶ್, ಕನ್ನಡದ ನಾಡು-ನುಡಿ, ನೆಲ-ಜಲ ಹಾಗೂ ಭಾಷೆಯ ಸೇವೆಗೆಂದೇ ತಮ್ಮ ಜೀವನವನ್ನು ಸಮರ್ಪಣೆ ಮಾಡಿದ್ದ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಡಾ. ರಾಜ್ ಕುಮಾರ್ ಅವರ ಜನಪ್ರಿಯತೆಯನ್ನು ಕೆಲವರು ಸಹಿಸಲಿಲ್ಲ. ಅವರ ಚಾರಿತ್ರ್ಯವಧೆ ಮಾಡುವ ದುರುದ್ದೇಶದಿಂದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿಸಿದ್ದ ಗೊಂದಲಗಳಿಗೆ ಸರ್ಕಾರಿ ದಾಖಲೆಗಳ ಸಹಿತ ತೆರೆ ಎಳೆಯಲು ಲೀಲಮ್ಮ ನಿನ್ನ ಗಂಡ ಯಾರಮ್ಮ? ಕೃತಿಯನ್ನು ರಚಿಸಲಾಗಿದೆ. ಈ ಕೃತಿಯ ಕೊನೆಯ 20 ಪುಟಗಳಲ್ಲಿ ದಿವಂಗತ ನಟಿ ಲೀಲಾವತಿ ಮತ್ತು ನಟ ವಿನೋದ್ ಕುಮಾರ್ ಎಂ.ಎಲ್. ಸ್ವತ್ತುಗಳಿಗೆ ಸಂಬಂಧಿಸಿದ ಅಧಿಕೃತ ಸರ್ಕಾರಿ ದಾಖಲೆಗಳನ್ನು ಕೃತಿಯಲ್ಲಿ ಅಡಕಗೊಳಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಪ್ರಕಾಶ್, ಸೋಮಣ್ಣ, ಹೊನ್ನೇಗೌಡ, ಡಾ. ರಾಜ್ ಕುಮಾರ್ ಸೇನೆಯ ತ್ಯಾಗರಾಜ್ ಹಾಜರಿದ್ದರು.