ಜಿಲ್ಲೆ

ದ್ರೋಹಿ ಟರ್ಕಿ ವಿರುದ್ಧ ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಬಾಯ್ಕಾಟ್​ ಸಮರ

ಬೆಂಗಳೂರು: ಭಾರತ-ಪಾಕ್​ ನಡುವಿನ ಸಂಘರ್ಷದಲ್ಲಿ ಪಾಕಿಸ್ತಾನ ಪರವಾಗಿ ನಿಂತು, ಸೇನಾ ನೆರವು ನೀಡಿದ್ದ ಟರ್ಕಿ ರಾಷ್ಟ್ರ ವಿರುದ್ಧ ಕರ್ನಾಟಕದಲ್ಲಿಯೂ ಬಹಿಷ್ಕಾರ ಅಭಿಯಾನ ಶುರುವಾಗಿದೆ. ಜೊತೆಗೆ, ಭಾರತದ ಬೆನ್ನಿಗೆ ಚೂರಿ ಹಾಕಿದ್ದ ಅಜರ್​ಬೈಜಾನ್​ಗೂ "ಬಾಯ್ಕಾಟ್​' ಬಿಸಿ ತಟ್ಟಿದೆ.

ಚೆರ್ರಿ, ಆಲಿವ್​ ಆಯಿಲ್​, ಮಾರ್ಬಲ್ಸ್​, ಎಲೆಕ್ಟ್ರಾನಿಕ್​ ವಸ್ತುಗಳು ಮತ್ತು ಫ್ಯಾಷನ್​ ಸೇರಿ ಇತರೆ ಉತ್ಪನ್ನಗಳನ್ನು ಈಗಾಗಲೇ ದೇಶದಲ್ಲಿ ಬ್ಯಾನ್​ ಮಾಡಲಾಗಿದೆ. ಟರ್ಕಿಯ ವಿಶೇಷ ಸೇಬು, ಒಣ ಹಣ್ಣು ಆಮದು ಮಾಡಿಕೊಳ್ಳುವುದಿಲ್ಲ ಎಂದು ಗುಜರಾತ್​, ಮಹಾರಾಷ್ಟ್ರ, ದೆಹಲಿ ಸೇರಿ ದೇಶಾದ್ಯಂತ ಹಲವು ರಾಜ್ಯಗಳ ವ್ಯಾಪಾರಸ್ಥರು ಘೋಷಿಸಿದ್ದಾರೆ. ಇದೀಗ "ಬಾಯ್ಕಾಟ್​' ಅಭಿಯಾನಕ್ಕೆ ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘ ಕೈಜೋಡಿಸಿದೆ.

ಯಾವುದೇ ಕಾರಣಕ್ಕೂ ಜವಳಿ ಉತ್ಪನ್ನಗಳನ್ನು ಟರ್ಕಿ ದೇಶದಿಂದ ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದೆ. ನಗರದಲ್ಲಿ 3 ಸಾವಿರಕ್ಕೂ ಅಧಿಕ ಸಗಟು ಬಟ್ಟೆ ವ್ಯಾಪಾರಿಗಳು ಇದ್ದಾರೆ. ಪ್ರತಿ ವರ್ಷ ಆ ದೇಶದಿಂದ ಫ್ಯಾಂಟ್​​​​, ಶರ್ಟ್​, ಟವಲ್​ ಸೇರಿ ಇತರೆ ಜವಳಿ ಉತ್ಪನ್ನಗಳ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇಲ್ಲಿಂದ ಸಹ ಆ ದೇಶಕ್ಕೆ ಕೆಲ ಉತ್ಪನ್ನಗಳನ್ನು ಕಳುಹಿಸಲಾಗುತ್ತಿತ್ತು. ಇದರಿಂದ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿತ್ತು. ಇದೀಗ ರಫ್ತು ಮತ್ತು ಆಮದು ಮಾಡಿಕೊಳ್ಳದಿರಲು ನಿರ್ಧರಿಸಿರುವ ವ್ಯಾಪಾರಿಗಳು, ಟರ್ಕಿಗೆ ಆರ್ಥಿಕ ಹೊಡೆತ ನೀಡಲು ಮುಂದಾಗಿದ್ದಾರೆ.

ಸಂಘದ ಅಧ್ಯಕ್ಷ ಪ್ರಕಾಶ್​ ಪಿರ್ಗಲ್​ ಮಾತನಾಡಿ, ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಉಗ್ರರು, 26 ಹಿಂದುಗಳನ್ನು ಅಮಾನುಷವಾಗಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಘಟನೆ ಬಳಿಕ ನಮ್ಮ ದೇಶ, ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೆಂಬಲವಾಗಿ ಟರ್ಕಿ ಮತ್ತು ಅಜರ್​ಬೈಜಾನ್​ ನಿಂತಿದ್ದವು. ಟರ್ಕಿಯಲ್ಲಿ ಭೀಕರ ಭೂಕಂಪವಾಗಿದ್ದಾಗ ಮಾನವೀಯತೆ ಆಧಾರದ ಮೇರೆಗೆ ಆ ದೇಶಕ್ಕೆ ಔಷಧ, ವೈದ್ಯರು, ವೈದ್ಯಕಿಯ ಸೇರಿ ಇತರೆ ಸಿಬ್ಬಂದಿ ಕಳುಹಿಸುವ ಮೂಲಕ ಭಾರತ ಸಹಾಯ ಮಾಡಿತ್ತು. ಈ ವಿಷಯ ಜಗತ್ತಿಗೂ ಗೊತ್ತಿತ್ತು. ಆದರೂ, ಭಾರತ ಮಾಡಿದ್ದ ಸಹಾಯವನ್ನು ಮೆರೆತ ಟರ್ಕಿ, ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿತ್ತು. ಆದ್ದರಿಂದ, ದ್ರೋಹಿ ಟರ್ಕಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳದಂತೆ ನಾವೆಲ್ಲರೂ ನಿರ್ಧರಿಸಿದ್ದೇವೆ ಎಂದು ಹೇಳಿದರು.