| ಮೃತ್ಯುಂಜಯ ಕಪಗಲ್ ಬೆಂಗಳೂರು
ವಿಧಾನಪರಿಷತ್ನಲ್ಲಿ ಬಲ ಹೆಚ್ಚಿಸಿಕೊಳ್ಳುವುದು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದರೆ, ತನ್ನ ಭದ್ರಕೋಟೆ ಉಳಿಸಿಕೊಳ್ಳುವ ಛಲ ಜೆಡಿಎಸ್ಗೆ. ಇನ್ನು ಕಾಂಗ್ರೆಸ್ಗೆ ಅಸ್ತಿತ್ವದ ಪ್ರಶ್ನೆ. ಮೇಲ್ಮನೆಯ ಇತ್ತೀಚಿನ ಅಧಿವೇಶನದಲ್ಲಿ ಕೈಗಾರಿಕಾ ವಿವಾದಗಳ ತಿದ್ದುಪಡಿ ಮಸೂದೆಗೆ ಸೋಲು, ಆಹೋರಾತ್ರಿ ಚರ್ಚೆ ನಡೆದರೂ ಭೂಸುಧಾರಣೆ, ಎಪಿಎಂಸಿ ಇನ್ನಿತರ ಮಹತ್ವದ ಮಸೂದೆಗಳು ಪರ್ಯಾಲೋಚನೆಗೂ ಬಾರದೆ ಬಿಜೆಪಿ ಸರ್ಕಾರ ಮುಖಭಂಗ ಅನುಭವಿಸಿದೆ. ಬಹುಮತ ಇಲ್ಲದಿರುವುದು, ಕಾಂಗ್ರೆಸ್-ಜೆಡಿಎಸ್ ಒಂದಾಗಿ ತಿರುಗಿ ಬಿದ್ದದ್ದು ಹಿನ್ನೆಡೆಗೆ ಕಾರಣವೆಂದು ಕಮಲ ನಾಯಕರಿಗೆ ಗೊತ್ತಿದೆ. ಹೀಗಾಗಿ ಚುನಾವಣೆ ಘೋಷಿತ 4 ವಿಧಾನಪರಿಷತ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಸಂಖ್ಯಾಬಲ ವೃದ್ಧಿಸಿಕೊಳ್ಳುವ ಪಣತೊಟ್ಟಿದೆ.
ಶಿಕ್ಷಣ ಕ್ಷೇತ್ರ ಬೆಳೆದಂತೆ ಸಮಸ್ಯೆಗಳೂ ಏರುಮುಖವಾಗುತ್ತಿದ್ದು, ಅನುದಾನರಹಿತ ಶಾಲೆಗಳ ಶಿಕ್ಷಕರ ವೇತನ ಸಮಸ್ಯೆಯೇ ಈ ಸಲದ ಚುನಾವಣಾ ಕಾರ್ಯಸೂಚಿಯಾಗಲಿದೆ. ಶಿಕ್ಷಕರ ಜತೆಗೆ ನಿಕಟ ಬಾಂಧವ್ಯ, ಸಮಸ್ಯೆಗಳಿಗೆ ಸ್ಪಂದನೆ, ಶಿಕ್ಷಣ ಸಂಸ್ಥೆಗಳು ಹಾಗೂ ಸಂಘಟನೆಗಳೊಂದಿಗೆ ಒಡನಾಟವೇ ಪೈಪೋಟಿಗೆ ಇಳಿದವರ ಭವಿಷ್ಯ ನಿರ್ಧರಿಸಿರುವುದು ಎಂಬುದನ್ನು ಈವರೆಗಿನ ಚುನಾವಣೆ ಫಲಿತಾಂಶಗಳು ಸಾರಿ ಹೇಳುತ್ತವೆ.
ಶಿಕ್ಷಣ ಕ್ಷೇತ್ರ ಹಾಗೂ ಸಂಸ್ಥೆಗಳ ಸಮಸ್ಯೆಗೆ ಪರಿಹಾರ, ಶಿಕ್ಷಕರ ವೈಯಕ್ತಿಕ ಕುಂದು-ಕೊರತೆಗಳಿಗೆ ಸ್ಪಂದನೆ, ಕಳೆದ 3 ಅವಧಿಯಲ್ಲಿ ಮಾಡಿದ ಸಾಧನೆಯೇ ನನಗೆ ಶ್ರೀರಕ್ಷೆ. ಜತೆಗೆ ಪಕ್ಷ, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ವರ್ಚಸ್ಸು ಪ್ಲಸ್ ಪಾಯಿಂಟ್. | ಪುಟ್ಟಣ್ಣ ಬಿಜೆಪಿ ಅಭ್ಯರ್ಥಿ ಎಚ್.ಡಿ.ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದು, ಜೆಡಿಎಸ್ನ ಭದ್ರಕೋಟೆಯಾಗಿದೆ. 3 ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ ವ್ಯಕ್ತಿ ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ನನ್ನ ಶಕ್ತಿ, ಸಾಮರ್ಥ್ಯದ ಬಗ್ಗೆ ಶಿಕ್ಷಕರು, ಶಿಕ್ಷಣ ರಂಗಕ್ಕೆ ವಿಶ್ವಾಸವಿದೆ. | ಎ.ಪಿ.ರಂಗನಾಥ ಜೆಡಿಎಸ್ ಅಭ್ಯರ್ಥಿ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಹೊಸತನ, ವಿಭಿನ್ನ ಚಿಂತನೆ ಹಾಗೂ ಸಮಸ್ಯೆಗಳಿಗೆ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯ ಅಭಿವೃದ್ಧಿ ಕೆಲಸಗಳು, ಬಲಿಷ್ಠ ನಾಯಕತ್ವ, ವೈಯಕ್ತಿಕ ಸಂಪರ್ಕ ಕೈಹಿಡಿಯಲಿವೆ. | ಪ್ರವೀಣ್ ಪೀಟರ್ ಕಾಂಗ್ರೆಸ್ ಅಭ್ಯರ್ಥಿ
ಕ್ಷೇತ್ರದ ವ್ಯಾಪ್ತಿ
ಬೆಂಗಳೂರು ನಗರ, ಗ್ರಾಮೀಣ, ರಾಮನಗರ ಜಿಲ್ಲೆಗಳು. 5 ಲೋಕ ಸಭಾ ಹಾಗೂ 36 ವಿಧಾನಸಭಾ ಕ್ಷೇತಗಳನ್ನು ಒಳಗೊಂಡಿದೆ. ಸರ್ಕಾರಿ, ಖಾಸಗಿ ಅನುದಾನಿತ, ಅನುದಾನರಹಿತ ಸೇರಿ 6,500 ಶಿಕ್ಷಣ ಸಂಸ್ಥೆಗಳಿರುವ ಅಂದಾಜು.
ರಾಜಕೀಯ ಬಲಾಬಲ
ಲೋಕಸಭಾ ಸದಸ್ಯರು- 4 ಬಿಜೆಪಿ, 1 ಕಾಂಗ್ರೆಸ್. ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ 14, ಜೆಡಿಎಸ್-6, ಪಕ್ಷೇತರ-1 ಮತ್ತು ಆರ್.ಆರ್.ನಗರ ಸದ್ಯಕ್ಕೆ ಖಾಲಿ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿ ಅವಧಿ ಮುಗಿದು, ಆಡಳಿತಾಧಿಕಾರಿ ನೇಮಕವಾಗಿದ್ದಾರೆ.