ಬೆಂಗಳೂರಿನಲ್ಲಿ ಗಲಭೆ ಮಾಡಿದವರನ್ನು ಬಂಧಿಸಿ ಕಠಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿಸಿ ಕಚೇರಿ ಆವರಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೃಷ್ಣ ಭಟ್, ಶ್ರೀಕಾಂತ ಕದಂ, ಬಸವರಾಜ ಗಾಣಗಿ, ಆನಂದ ಕರಲಿಂಗಣ್ಣವರ, ವಿಜಯ ಜಾಧವ ಇತರರು ಇದ್ದರು. 
ಜಿಲ್ಲೆ

ಬೆಂಗಳೂರು ಗಲಭೆಕೋರರಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯ

ಬೆಳಗಾವಿ: ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಘಟನೆ ಪೂರ್ವ ನಿಯೋಜಿತ ಷಡ್ಯಂತ್ರವಾಗಿದ್ದು, ಗಲಾಟೆ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸುದ್ದಿ ಬಿತ್ತರಗೊಂಡಿದೆ ಎಂಬ ನೆಪದಲ್ಲಿ ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿಯೇ ಬೆಂಗಳೂರಿನಲ್ಲಿ ಪೊಲೀಸ್ ಠಾಣೆಗೆ, ಶಾಸಕರ ಮನೆಗೆ ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಬೇಕೆಂಬ ಉದ್ದೇಶದಿಂದಲೇ ನಿರಂತರ ಗಲಾಟೆ ನಡೆಸುತ್ತಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಬೆಂಬಲ: ರಾಜ್ಯದಲ್ಲಿ ಹಿಂದು ಸಮಾಜ ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದ್ದು, ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಯೋಜನಾಬದ್ಧ ಷಡ್ಯಂತ್ರದ ಭಾಗವಾಗಿಯೇ ಬೆಂಗಳೂರಿನಲ್ಲಿ ಗಲಭೆ, ಗಲಾಟೆಗಳು ನಡೆದಿವೆ. ಪೊಲೀಸರು ಮತ್ತು ಪತ್ರಕರ್ತರಿಗೆ ಸರ್ಕಾರ ಅಗತ್ಯ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಆಸ್ತಿ ಮುಟ್ಟುಗೋಲು ಹಾಕಿ: ಗಲಭೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆಹಚ್ಚಿ, ಅವರೆಲ್ಲರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ಹಾನಿಯ ನಷ್ಟವನ್ನು ಗಲಭೆಕೋರರಿಂದಲೇ ಭರಿಸಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯೋಗಿ ಆದಿತ್ಯನಾಥ ಅವರ ಮಾದರಿಯಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಘಟನೆಯಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಭಾಗಿಯಾಗಿರುವ ಹಿನ್ನೆಲೆಯಲ್ಲಿ ಆ ಎರಡು ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡ ಕೃಷ್ಣ ಭಟ್, ಶ್ರೀಕಾಂತ ಕದಂ, ಬಸವರಾಜ ಗಾಣಗಿ, ಆನಂದ ಕರಲಿಂಗಣ್ಣವರ, ವಿಜಯ ಜಾಧವ, ಗಿರೀಶ ದೊಂಗಡಿ, ಆದಿನಾಥ ಗಾವಡೆ, ಗಣೇಶ ಚೌಗಲೆ ಇನ್ನಿತರರು ಇದ್ದರು.