ಜಿಲ್ಲೆ

ಹಿರಿಯ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದ್ರೂ ನಿಲ್ಲದ ಲಂಚದ ವ್ಯಾಮೋಹ: ಮತ್ತೆ ಸಿಕ್ಕಿಬಿದ್ದ ಮಹಿಳಾ ಇನ್ಸ್​ಪೆಕ್ಟರ್​!

ಬೆಂಗಳೂರು: ವೈಟ್​​ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್, ಇಬ್ಬರು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್ ಹಾಗೂ ಓರ್ವ ಕಾನ್ಸ್​ಟೇಬಲ್​ರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಇನ್ಸ್​​ಪೆಕ್ಟರ್ ರೇಣುಕಾ, ಪಿಎಸ್​ಐ ನವೀನ್ ಮತ್ತು ಗಣೇಶ್ ಹಾಗೂ ಕಾನ್ಸ್​ಟೇಬಲ್ ಹೇಮಂತ್ ಅಮಾನತಾದ ಪೊಲೀಸ್​ ಸಿಬ್ಬಂದಿ. ಎಸಿಬಿ ಸಲ್ಲಿಸಿದ ವರದಿ ಆಧರಿಸಿ ಡಿಜಿಪಿ ಪ್ರವೀಣ್ ಸೂದ್​ ಅವರು ಇನ್ಸ್​ಪೆಕ್ಟರ್ ರೆಣುಕಾರನ್ನು ಅಮಾನತು ಮಾಡಿದರೆ, ಇಬ್ಬರು ಪಿಎಸ್​ಐ ಹಾಗೂ ಓರ್ವ ಕಾನ್ಸ್​ಟೇಬಲ್​ನನ್ನು ಪೊಲೀಸ್​ ಆಯುಕ್ತರು ಅಮಾನತು ಮಾಡಿದ್ದಾರೆ.

ಹೋಂ ಡೆಕೊರೇಷನ್ ವಿವಾದ ಬಗೆಹರಿಸುವ ನೆಪದಲ್ಲಿ ಉದ್ಯಮಿ ಬಳಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಅಮಾನತಾದ ಪೊಲೀಸ್​ ಸಿಬ್ಬಂದಿಯ ಮೇಲಿದೆ. ದೂರುದಾರ ಗೋಪಿನಾಥ್ ಎಂಬುವವರ ಬಳಿ ಹಣಕ್ಕೆ ಬೇಡಿಕೆ ಇಡುವಂತೆ ಇನ್ಸ್​ಪೆಕ್ಟರ್​​ ರೇಣುಕಾ ಸೂಚನೆ ನೀಡಿದ ಹಿನ್ನಲೆಯಲ್ಲಿ ಇಬ್ಬರು ಪಿಎಸ್​ಐಗಳು 5 ಲಕ್ಷ ರೂ. ಹಣ ಪಡೆದಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಎಸಿಬಿಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಹಣ ಪಡೆದ ಆರೋಪ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ರೇಣುಕಾ ಮನೆ ಮೇಲೆ ದಾಳಿ ಮಾಡಿದ್ದರು. ಕಳೆದ ಒಂದು ವರ್ಷದ ಹಿಂದೆ ರೇಣುಕಾ, ಪಿಎಸ್ಐಯಿಂದ ಇನ್ಸ್​ಪೆಕ್ಟರ್​ಗೆ ಬಡ್ತಿ ಪಡೆದಿದ್ದರು. ಈ ಹಿಂದೆಯೂ ಸಹ ಹಿರಿಯ ಪೊಲೀಸ್ ಅಧಿಕಾರಿಗಳು ರೇಣುಕಾಗೆ ಎಚ್ಚರಿಕೆ ನೀಡಿದ್ದರು. ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ಬಂದ ಎರಡೇ ದಿನದಲ್ಲಿ ಲಂಚ ಪಡೆದ ಆರೋಪ ಹೊತ್ತು ರೇಣುಕಾ ಅಮಾನತಾಗಿದ್ದಾರೆ. (ದಿಗ್ವಿಜಯ ನ್ಯೂಸ್)