ಬೆಂಗಳೂರು: ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಹಾಗೂ ದಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನೇರಳೆ ಮಾರ್ಗದ ಕೆ.ಆರ್.ಪುರ ನಿಲ್ದಾಣದಿಂದ ಇಂಟರ್ಚೇಂಜ್ ನಿಲ್ದಾಣವಾದ ನಾಡಪ್ರಭು ಕೆಂಪೇಗೌಡ (ಮೆಜಸ್ಟಿಕ್) ನಿಲ್ದಾಣದವರೆಗೆ ಸೋಮವಾರ ಮೆಟ್ರೋ ರೈಲಿನಲ್ಲಿ ಸಂಚರಿಸಿದರು. ಸಂಜೆಯ ಪೀಕ್ ಅವರ್ನಲ್ಲಿ ಸಂಚರಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು.
ಮೆಜಸ್ಟಿಕ್ ನಿಲ್ದಾಣದಲ್ಲಿ ಸಂಸದರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮ ಮೆಟ್ರೋ ರಾಜಧಾನಿಯ ಪ್ರಮುಖ ಸಾರಿಗೆ ಸಂಪರ್ಕವಾಗಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಪೀಕ್ ಅವರ್ನಲ್ಲಿ ದಟ್ಟಣೆ ಉಂಟಾಗುತ್ತಿದೆ. ಅದರಲ್ಲೂ ಐಟಿ ಕಾರಿಡಾರ್ ಹಾಗೂ ಮೆಜೆಸ್ಟಿಕ್ ನಿಲ್ದಾಣಗಳ ನಡುವೆ ಜನದಟ್ಟಣೆ ಕಂಡುಬಂದಿದೆ. ಜತೆಗೆ ಆಗಾಗ್ಗೆ ಅಡೆತಡೆಗಳು ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ರೈಲಿನಲ್ಲಿ ಪ್ರಯಾಣಿಸಿ ಆ ಸಮಸ್ಯೆಗಳನ್ನು ಆಲಿಸಿದ್ದೇವೆ. ಅವುಗಳನ್ನು ಬಿಎಂಆರ್ಸಿಎಲ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸದ್ಯ 18 ಸೆಟ್ಗಳ ರೈಲುಗಳಿಂದ ಶಾರ್ಟ್ ಲೂಪ್ ಸೇವೆ ನಡೆಯುತ್ತಿದೆ. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪಟ್ಟಂದೂರು ಅಗ್ರಹಾರದ ವರೆಗೆ ಶಾರ್ಟ್ಲೂಪ್ ಸೇವೆಯನ್ನು ವಿಸ್ತರಿಸುವ ಸಾಧ್ಯತೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಜತೆಗೆ ಮಹಾತ್ಮ ಗಾಂಧಿ ರಸ್ತೆ ಹಾಗೂ ಮೆಜೆಸ್ಟಿಕ್ ನಿಲ್ದಾಣಗಳ ನಡುವೆ ಶಾರ್ಟ್ ಲೂಪ್ ಸೇವೆ ಹೆಚ್ಚಿಸಲು ಸೂಚಿಸಿದ್ದೇವೆ ಎಂದರು.
ನಮ್ಮ ಮೆಟ್ರೋಗೆ 21 ಸೆಟ್ ರೈಲುಗಳನ್ನು ಪೂರೈಸಲು ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾಪೋರ್ರೇಷನ್ಗೆ (ಸಿಆರ್ಆರ್ಸಿ) ಈಗಾಗಲೇ ಗುತ್ತಿಗೆ ಪಡೆದುಕೊಂಡಿದೆ. ಕಾರಣಾಂತರದಿಂದ ಪೂರೈಕೆಯಲ್ಲಿ ತಡವಾಗುತ್ತಿದೆ. ಹೀಗಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ಮುಂದಿನ ವಾರ ಕೇಂದ್ರ ಸರ್ಕಾರದ ಜತೆಗೆ ಚರ್ಚಿಸಲಿದ್ದಾರೆ. ಜೂನ್ 2025ರಿಂದ ಪ್ರತಿ ತಿಂಗಳು ಮೂರು ರೈಲುಗಳ ಸೆಟ್ ಸಿಆರ್ಆರ್ಸಿ ಇಂದ ಪೂರೈಕೆಯಾಗಲಿದೆ. ಇದರಿಂದ 2026ರ ಒಳಗಾಗಿ ಶೇ.40ಕ್ಕಿಂತ ಹೆಚ್ಚು ಜನರಿಗೆ ಪ್ರಯಾಣಿಸಲು ಅವಕಾಶ ಸಿಗುತ್ತದೆ. ಜತೆಗೆ ಪೀಕ್ ಅವರ್ನಲ್ಲಿ 3 ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ನಿಲ್ದಾಣಗಳಲ್ಲಿ ಪಿಎಸ್ಡಿ ದ್ವಾರಗಳನ್ನು ಅಳವಡಿಸಲು ಸಾಧ್ಯವಿದೆ. ಕಾರ್ಯಾಚರಿಸುತ್ತಿರುವ ಹಸಿರು ಹಾಗೂ ನೇರಳೆ ಮಾರ್ಗದ ನಿಲ್ದಾಣಗಳಲ್ಲಿ ಅಳವಡಿಸಲು ತಾಂತ್ರಿಕ ಸಮಸ್ಯೆಗಳಿವೆ. ಈ ಬಗ್ಗೆ ಬೇರೆ ಬೇರೆ ಮಾದರಿಗಳನ್ನು ಪರಿಶೀಲಿಸಿ ತಜ್ಞರ ತಂಡ ಅಧ್ಯಯನ ನಡೆಸುತ್ತಿದೆ. ಮೆಜೆಸ್ಟಿಕ್ ನಿಲ್ದಾಣದಿಂದ ದ್ವಾರ ಅಳವಡಿಸಲು ಆರಂಭಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಭರಿಸಲು ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಬನಶಂಕರಿ ಮೆಟ್ರೋ ನಿಲ್ದಾಣದಿಂದ ಬಿಎಂಟಿಸಿ ಬಸ್ ನಿಲ್ದಾಣದ ಮಧ್ಯದಲ್ಲಿ ಜನರಿಗೆ ಓಡಾಡಲು ಕಷ್ಟವಾಗುತ್ತಿದೆ. ಇಲ್ಲಿ ಸ್ಕೆ$ವಾಕ್ ಹಾಗೂ ಟ್ರಾವೆಲೇಟರ್ ಅಳವಡಿಸಲು ಬಿಬಿಎಂಪಿ ಕಳೆದ ಬಜೆಟ್ನಲ್ಲಿ 50 ಕೋಟಿ ರೂ. ಮೀಸಲಿಟ್ಟಿದೆ. ಕಾಮಗಾರಿ ಇನ್ನೂ ಆರಂಭವಾಗದ ಕಾರಣ ಬಿಎಂಆರ್ಸಿಎಲ್ ಸಹಯೋಗದಲ್ಲಿ ಸ್ಕೈವಾಕ್ ನಿರ್ಮಿಸುವ ಬಗ್ಗೆ ಚರ್ಚೆ ನಡೆದಿದೆ.
-ತೇಜಸ್ವಿ ಸೂರ್ಯ, ಸಂಸದ