ಉಡುಪಿ: ನಾಡಪ್ರಭು ಕೆಂಪೇಗೌಡರು ಭವಿಷ್ಯ ಗಮನದಲ್ಲಿಟ್ಟುಕೊಂಡು ನಿರ್ಮಿಸಿದ ಬೆಂಗಳೂರು ನಗರವು ಇಂದು ಇಡೀ ವಿಶ್ವದ ಜನರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಿದೆ. ಕೋಟ್ಯಾಂತರ ಜನರು ಬದುಕು ಕಟ್ಟಿಕೊಳ್ಳಲು ಆಶ್ರಯ ನೀಡಿದೆ ಎಂದು ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ನಗರ ನಿಮಾರ್ಣ ಕೆಂಪೇಗೌಡರ ಅತಿದೊಡ್ಡ ಕನಸಾಗಿತ್ತು. ನಗರ ನಿಮಾರ್ಣಕ್ಕೆ ಬೇಕಾದ ಅಗತ್ಯತೆಗಳ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ನಾಡಿನ ಭವಿಷ್ಯದ ದೃಷ್ಟಿಯಿಂದ ಹಾಗೂ ಮುಂದಿನ ಪೀಳಿಗೆಯ ಏಳಿಗೆಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಇಂತಹ ದೂರದೃಷ್ಟಿಯುಳ್ಳ ನಾಯಕರು ಆಡಳಿತ ವ್ಯವಸ್ಥೆಗೆ ಮಾದರಿ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹಾಗೂ ಒಕ್ಕಲಿಗ ಸೇವಾ ಸಂಘದ ಕಾರ್ಯದರ್ಶಿ ಹೇಮಾನಂದ ಹಲ್ದಡ್ಕ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಐರೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಒಕ್ಕಲಿಗ (ಗೌಡ) ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಸೀತಾರಾಮ ಗೌಡ ಎ., ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ದಯಾನಂದ ಡಿ. ಕಿದಿಯೂರು ನಿರೂಪಿಸಿ, ಉಪನ್ಯಾಸಕ ಗಂಗಾಧರ್ ವಂದಿಸಿದರು.