ಬೆಂಗಳೂರು:
ನಗರ್ತರಪೇಟೆ ಸೇರಿ ಧರ್ಮರಾಯಸ್ವಾಮಿ ದೇವಾಲಯದ ಸುತ್ತಮುತ್ತಲ ಬೀದಿಬೀದಿಗಳಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತಸಮೂಹ, ಕಣ್ಣಿಗೆ ಹಬ್ಬ ಉಂಟುಮಾಡುವ ವಿದ್ಯುದ್ದೀಪಾಲಂಕಾರ, ಗಣ್ಯಾತಿಗಣ್ಯರಿಂದ ಪೂಜೆ, ಕಿವಿಗಡಚಿಕ್ಕುವಂತೆ ಭಕ್ತರ ಸಂಭ್ರಮದ ಕೇಕೆ, ‘ಗೋವಿಂದ... ಗೋವಿಂದ...’ ನಾಮಜಪ, ಕೈಯಲ್ಲಿ ಖಡ್ಗ ಹಿಡಿದು ಸಾಗಿದ ವೀರಕುಮಾರರು... ಐತಿಹಾಸಿಕ ‘ಬೆಂಗಳೂರು ಕರಗ’ದಲ್ಲಿ ಶನಿವಾರ ತಡರಾತ್ರಿ ಕಂಡುಬಂದ ಚಿತ್ರಣಗಳಿವು.
ನೆರೆದಿದ್ದ ಗಣ್ಯರಿಗೆ ದರ್ಶನ ಕೊಟ್ಟು, ನಿಂಬೆಹಣ್ಣಿನ ಪ್ರಸಾದ ನೀಡಿ, ದೇವಸ್ಥಾನದ ಮುಖ್ಯರಸ್ತೆಯಿಂದ ಹೊರಟ ಮಲ್ಲಿಗೆ ಕಂಪಿನ ಹೂವಿನ ಕರಗ ಸುತ್ತಮುತ್ತಲ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸುತ್ತ ಮುಂಜಾನೆವರೆಗೆ ನಗರದ ಗಾಣಿಗರಪೇಟೆ, ನಗರ್ತರಪೇಟೆ, ಉಪ್ಪಾರಪೇಟೆ, ಅಕ್ಕಿಪೇಟೆ, ಮಾಮೂಲುಪೇಟೆ, ತಿಗಳರಪೇಟೆ, ಮುಖಾಂತರ ಸಾಗುತ್ತ ಅರಳೇಪೇಟೆಯ ತವಕಲ್ ಮಸ್ತಾನ್ ಸಾಹೇಬರ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿತು. ಅಲ್ಲಿಂದ ಅವೆನ್ಯೂ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಸೇರಿ ಸುತ್ತಮುತ್ತಲ ಪ್ರದೇಶಗಳ ದೇವಸ್ಥಾನಗಳು ಹಾಗೂ ಕುಲಬಾಂಧವರ ಮನೆಯಲ್ಲಿ ಪೂಜೆ ಸ್ವೀಕರಿಸುತ್ತ ಸುಮಾರು 20 ಕಿ.ಮೀ. ಅಧಿಕ ಸಂಚರಿಸಿದ ಕರಗ ಬೆಳಗ್ಗೆ 11.15ಕ್ಕೆ ದೇವಾಲಯದ ಸಮೀಪ ಆಗಮಿಸಿತು. ಈ ವೇಳೆ ಕರಗಕರ್ತ ಜ್ಞಾನೇಂದ್ರ ದಣಿವರಿಯದೇ ವಾದ್ಯಕ್ಕೆ ಹೆಜ್ಜೆಹಾಕುತ್ತ ದೇಗುಲಕ್ಕೆ 11 ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ನೆರದವರನ್ನು ನಿಬ್ಬೆರಗಾಗಿಸಿದರು.
ಕರಗ ವೀಕ್ಷಿಸಲೆಂದೇ ಮರ, ಮಹಡಿಗಳನ್ನು ಏರಿ ಕುಳಿತಿದ್ದ ಭಕ್ತರು ತಡರಾತ್ರಿ 2.30ಕ್ಕೆ ದೇವಾಲಯದಿಂದ ಸಾಗಿದ ಕರಗ ಕಂಡು ಭಕ್ತರು ಭಕ್ತಿಪರವಶರಾದರು. ಮೊದಲಿಗೆ ದೇವಾಲಯದಿಂದ ಧರ್ಮರಾಯ, ದ್ರೌಪದಿದೇವಿ ಸೇರಿ ಉತ್ಸವ ಮೂರ್ತಿಗಳನ್ನು ತಂದು ಬೃಹತ್ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಥೋತ್ಸವದ ಬೆನ್ನಲ್ಲೇ ವಿವಿಧ ಧಾರ್ಮಿಕ ವಿಧಾನಗಳಗೊಂದಿಗೆ ಪೂಜೆ ಸಲ್ಲಿಸುವ ಮೂಲಕ ಅರ್ಚಕ ಜ್ಞಾನೇಂದ್ರ ಕರಗ ಹೊತ್ತು ನಗರ ಪ್ರದಕ್ಷಿಣೆಗೆ ಹೊರಟರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಎನ್.ಎ. ಹ್ಯಾರಿಸ್ ಸೇರಿ ವಿವಿಧ ಕ್ಷೇತ್ರದ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ಧರ್ಮರಾಯಸ್ವಾಮಿಗೆ ಪೂಜೆ ಸಲ್ಲಿಸಿದರು. ಮತ್ತೊಂದೆಡೆ, ಧರ್ಮರಾಯಸ್ವಾಮಿ ರಥೋತ್ಸವದ ಜತೆಗೆ ನಾನಾ ಭಾಗಗಳಿಂದ ಆಗಮಿಸಿದ್ದ ನೂರಾರು ಪಲ್ಲಕ್ಕಿ ರಥಗಳೂ ಕೆ.ಆರ್. ಮಾರುಕಟ್ಟೆ ಸೇರಿ ದೇವಾಲಯದ ದೇವಳದ ಸುತ್ತಮುತ್ತಲ ಬೀದಿಗಳನ್ನು ಸೇರಿ ಭಕ್ತರಿಗೆ ದರ್ಶನ ನೀಡಿದವು.
ವೀರಕುಮಾರರಿಂದ ಹಲ್ಲೆ:
ಕರಗ ಸಾಗುವ ವೇಳೆ ಯುವಕನೊಬ್ಬನ ಜತೆಗೆ ವೀರಕುಮಾರರು ಗಲಾಟೆ ಮಾಡಿಕೊಂಡರು. ಈ ವೇಳೆ ವೀರಕುಮಾರರ ಗುಂಪು ಯುವಕನ ಮೇಲೆರಗಿ ಹಲ್ಲೆ ನಡೆಸಿತು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿ, ನೂಕುನುಗ್ಗಲು ಉಂಟಾದ್ದರಿಂದ ಭಕ್ತರು ಪರದಾಡಬೇಕಾಯಿತು.
ಜಾತ್ರೆಯ ಸ್ವರೂಪ:
ಕರಗ ಶಕ್ತ್ಯುತ್ಸವ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಸುತ್ತಮುತ್ತಲ ಬೀದಿಗಳಲ್ಲಿ ಭಾನುವಾರವೂ ಜಾತ್ರೆ ವಾತಾವರಣವಿತ್ತು. ನಾನಾ ಭಾಗಗಳಿಂದ ಆಗಮಿಸಿದ್ದ ದೇವರುಗಳ ಪಲ್ಲಕ್ಕಿ ರಥಗಳು ಮಾರುಕಟ್ಟೆ, ನಗರ್ತರಪೇಟೆ, ಅವೆನ್ಯೂ ರಸ್ತೆ ಸೇರಿ ಸುತ್ತಮುತ್ತಲ ಬೀದಿಗಳಲ್ಲಿ ನಿಂತು ಸಂಜೆಯವರೆಗೂ ಭಕ್ತರಿಗೆ ದರ್ಶನ ನೀಡಿದವು. ಉತ್ಸವ ಹಿನ್ನೆಲೆಯಲ್ಲಿ ಇಡೀ ಮಾರುಕಟ್ಟೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಗಾವು ಶಾಂತಿ:
ಕರಗ ಶಕ್ತ್ಯುತ್ಸವ ದೇವಾಲಯ ಸೇರಿದ ಬಳಿಕ ವಿವಿಧ ಧಾರ್ಮಿಕ ಆಚರಣೆಗಳ ಜತೆಗೆ ‘ಭಾರತ ಕಥಾ ಪ್ರವಚನ’ವೂ ನಡೆಯಿತು. ನಂತರ ಶಕ್ತಿಸ್ಥಳದ ಸುತ್ತ ಎಂಟು ದಿಕ್ಕಿಗೂ ಗಾವು ಶಾಂತಿ ಮಾಡಲಾಯಿತು. ಇಂದು (ಏ. 14) ವಸಂತೋತ್ಸವ ಆಚರಣೆ ನಡೆಯಲಿದ್ದು, ಧ್ವಜಾವರೋಹಣದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.