ಬೆಂಗಳೂರು: ರಾಜಧಾನಿಯಲ್ಲಿ ಮಂಗಳವಾರ ಗುಡುಗು-ಮಿಂಚು ಸಹಿತ ಸುರಿದ ಭಾರಿ ಮಳೆಗೆ ಹಲವು ಬಡಾವಣೆಗಳ ನಿವಾಸಿಗಳು ಸಂಕಷ್ಟ ಅನುಭವಿಸಿದರು. ಮೋರಿಗಳು ಕಟ್ಟಿಕೊಂಡು ರಸ್ತೆಯಲ್ಲಿ ನೀರು ಹರಿದ ಪರಿಣಾಮ ವಾಹನಸವಾರರು ಪರದಾಡಿದರು.
ಮಂಗಳವಾರ ಮಧ್ಯಾಹ್ನದ ಬಳಿಕ ಸುರಿದ ಮಳೆಗೆ ನಾಗಸಂದ್ರದ ಗುಂಡಪ್ಪ ಬಡಾವಣೆಯಲ್ಲಿ ಮೋರಿಯಲ್ಲಿ ನೀರು ಸರಾಗವಾಗಿ ಹರಿಯದ ಹಿನ್ನೆಲೆಯಲ್ಲಿ ಸುತ್ತಲಿನ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತು. ರಾತ್ರಿ ಸುರಿದ ಮಳೆಗೆ ಸುಧಾಮನಗರದ ತಗ್ಗು ಪ್ರದೇಶದ ಕೆಲವು ಮನೆಗಳು ಜಲಾವೃತವಾದವು.
ಓಕಳಿಪುರ, ಶಿವಾನಂದ ವೃತ್ತ, ನಾಯಂಡಹಳ್ಳಿ, ದೊಡ್ಡನೆಕ್ಕುಂದಿ, ಕಾಡುಬೀಸನಹಳ್ಳಿ ಸೇರಿ ವಿವಿಧ ಅಂಡರ್ಪಾಸ್ಗಳಲ್ಲಿ ನೀರು ನಿಂತುಕೊಂಡಿತ್ತು. ಶಾಂತಿನಗರ, ಲಾಲ್ಬಾಗ್, ತುಮಕೂರು ರಸ್ತೆಯ ಗೊರಗುಂಟೆಪಾಳ್ಯ, ಬಸವೇಶ್ವರನಗರ, ನಾಗಸಂದ್ರ, ಆರ್.ಆರ್. ನಗರ, ಯಶವಂತಪುರ ಮಾರುಕಟ್ಟೆ, ಯಲಹಂಕ, ಕನಕಪುರ ರಸ್ತೆ ಹಾಗೂ ಮಾಗಡಿ ರಸ್ತೆಯ ಕೆಲವು ಭಾಗದಲ್ಲಿ ನೀರು ನಿಂತುಕೊಂಡು ವಾಹನ ಸವಾರರು ತೊಂದರೆ ಅನುಭವಿಸಿದರು. ಸಂಜೆ ನಂತರ ಪಾಲಿಕೆ ಮತ್ತು ಜಲಮಂಡಳಿ ಸಿಬ್ಬಂದಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.
ಜಯನಗರ ವಾರ್ಡ್ನ 1ನೇ ಬ್ಲಾಕ್ನಲ್ಲಿ ಮಳೆ ನಡುವೆಯೇ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಮಳೆ ಮುನ್ಸೂಚನೆಯಿದ್ದರೂ ಪಾಲಿಕೆ ಅಧಿಕಾರಿಗಳು ಬಿಸಿ ಡಾಂಬರು ಮಿಶ್ರಣವನ್ನು ಟಿಪ್ಪರ್ನಲ್ಲಿ ತರಲು ಆದೇಶ ನೀಡಿದ್ದರು. ನಂತರ ಡಾಂಬರು ಹಾಳಾಗುತ್ತದೆ ಎಂದು ಮಳೆನೀರಿನಲ್ಲಿಯೇ ರಸ್ತೆಗೆ ಸುರಿದು ಹೋಗಿದ್ದಾರೆ. ಇದರಿಂದ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.
5 ಸೆಂ.ಮೀ. ಮಳೆಯಾದರೆ ಹಾನಿ
ನಗರದಲ್ಲಿ ಮಳೆಯಾದರೆ ಪ್ರವಾಹಕ್ಕೆ ತುತ್ತಾಗುವ 200ಕ್ಕೂ ಅಧಿಕ ಪ್ರದೇಶಗಳನ್ನು ಪಾಲಿಕೆಯಿಂದ ಗುರುತಿಸಿ ನಿಗಾವಹಿಸಲಾಗುತ್ತಿದೆ. ಆದರೆ ಈ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಭಾಗದಲ್ಲಿ 5 ಸೆಂಮೀ (50 ಮಿಮೀ) ಮಳೆಯಾದಲ್ಲಿ ಪ್ರವಾಹ ಸೃಷ್ಟಿಯಾಗುವುದು ಖಚಿತ. ಚೊಕ್ಕಸಂದ್ರದಲ್ಲಿ ಮಂಗಳವಾರ 5 ಸೆಂಮೀಗಿಂತ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ರಸ್ತೆ ಮತ್ತು ಬಡಾವಣೆಗಳಲ್ಲಿ ಮೊಣಕಾಲುದ್ದ ನೀರು ನಿಂತುಕೊಂಡು ಸಾರ್ವಜನಿಕರು ಪರದಾಡಿದ ದೃಶ್ಯಗಳು ಕಂಡುಬಂದವು.
ಜೀವಬಲಿಗೆ ಕಾದಿವೆ ರಸ್ತೆಗುಂಡಿಗಳು
ನಗರದ ಬಹುತೇಕ ರಸ್ತೆಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಗುಂಡಿಗಳು ಬಾಯಿ ತೆರೆದಿವೆ. ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದು, ಕೇವಲ ಮಣ್ಣು ಮುಚ್ಚಿ ಬಿಡಲಾಗಿದೆ. ಮತ್ತೆ ಕೆಲವು ಕಡೆಗಳಲ್ಲಿ ಮ್ಯಾನ್ಹೋಲ್ ಮತ್ತು ಇತರೆ ಕಾಮಗಾರಿಗೆ ಅಗೆದ ರಸ್ತೆಗೆ ಅವೈಜ್ಞಾನಿಕವಾಗಿ ಡಾಂಬರ್ ಹಾಕಲಾಗಿದೆ. ರಾಜಾಜಿನಗರ ಹಳೇ ಪೊಲೀಸ್ ಠಾಣೆ ವೃತ್ತ, ಚಾಮರಾಜಪೇಟೆ ಬುಲ್ಟೆಂಪಲ್ ರಸ್ತೆ, ಬಾಪೂಜಿನಗರ, ಮಲ್ಲೇಶ್ವರ, ಯಶವಂತಪುರ ಮುಂತಾದೆಡೆ ಮಳೆಯಿಂದ ಗುಂಡಿ ಬಿದ್ದು ವಾಹನಸವಾರರ ಜೀವ ಬಲಿಗೆ ಕಾಯುತ್ತಿವೆ. ಕೆಲವೆಡೆ ಸಾರ್ವಜನಿಕರೇ ಗುಂಡಿಗಳಿಗೆ ಕೋಲು ಸಿಕ್ಕಿಸಿ, ಬಟ್ಟೆ ಹಾಕಿ ಎಚ್ಚರಿಕೆ ಸಂಕೇತ ರವಾನಿಸಿದ್ದಾರೆ.